ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಭಾನುವಾರ ಅಂದರೆ ಆಗಸ್ಟ್ 4 ರಂದು ಕೊಲಂಬೊದಲ್ಲಿ ನಡೆಯಲಿದೆ. ಶುಕ್ರವಾರ ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯ ಟೈ ಆಗಿತ್ತು. ಹೀಗಾಗಿ ಉಭಯ ತಂಡಗಳು ಈ ಸರಣಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕಾದರೆ, ನಾಳಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಒಂದೆಡೆ ಗೆಲ್ಲುವ ಪಂದ್ಯವನ್ನು ಕಳೆದುಕೊಂಡ ಬೇಸರದಲ್ಲಿ ಭಾರತ ತಂಡವಿದ್ದರೆ, ಇನ್ನೊಂದೆಡೆ ಸೋಲುವ ಪಂದ್ಯವನ್ನು ಟೈ ಮಾಡಿಕೊಂಡ ಆತ್ಮವಿಶ್ವಾದಲ್ಲಿ ಲಂಕಾ ತಂಡ ಬೀಗುತ್ತಿದೆ. ಹೀಗಾಗಿ ಎರಡನೇ ಏಕದಿನ ಪಂದ್ಯ ತೀವ್ರ ರೋಚಕತೆ ಹೆಚ್ಚಿಸಿದೆ.
ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿತ್ತಾದರೂ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಿರಲಿಲ್ಲ. ಆದರೆ ಭಾನುವಾರವೂ ಮಳೆಯಾಗುವ ಮುನ್ಸೂಚನೆ ಇದೆಯಾದರೂ ಮಳೆ ಬಾರದಿರಲಿ ಎಂಬ ನಿರೀಕ್ಷೆಯಲ್ಲಿ ಉಭಯ ತಂಡಗಳು ಹಾಗೂ ಅಭಿಮಾನಿಗಳು ಇದ್ದಾರೆ. ಇನ್ನು ಕೊಲಂಬೊ ಪಿಚ್ ಬಗ್ಗೆ ಹೇಳುವುದಾದರೆ ಇಲ್ಲಿ ರನ್ ಗಳಿಸುವುದು ಕಷ್ಟ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಇನ್ನಷ್ಟು ಕಷ್ಟಕರವಾಗಿದೆ. ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಕೊಲಂಬೊದ ಹವಾಮಾನ ಮತ್ತು ಪಿಚ್ ವರದಿ ಹೇಗಿದೆ ಎಂಬುದನ್ನು ನೋಡೋಣ
ಅಕ್ಯುವೆದರ್ ಪ್ರಕಾರ, ಆಗಸ್ಟ್ 4 ರಂದು ಮಧ್ಯಾಹ್ನ 73% ಮತ್ತು ಸಂಜೆ 70% ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದುದ್ದಕ್ಕೂ ಮಳೆಯಾಗುವ ಸಾಧ್ಯತೆಯಿದ್ದರೂ ಮೊದಲ ಏಕದಿನ ಪಂದ್ಯದ ಮೇಲೆ ಪರಿಣಾಮ ಬೀರಲಿಲ್ಲ. ಈ ಪಂದ್ಯದಲ್ಲೂ ಅದೇ ಆಗಲಿದೆ ಎಂಬುದು ಅಭಿಮಾನಿಗಳ ಆಶಯ. ತಾಪಮಾನವು ಸುಮಾರು 28-30 ಡಿಗ್ರಿ ಇರುತ್ತದೆ. ಆರ್ದ್ರತೆಯು ಸುಮಾರು 80% ಆಗಿರುತ್ತದೆ ಎಂದು ವರದಿಯಾಗಿದೆ.
ಪ್ರೇಮದಾಸ ಮೈದಾನದಲ್ಲಿ ಆಗಸ್ಟ್ 2 ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲೂ ಸ್ಪಿನ್ನರ್‌ಗಳು ನೆರವು ಪಡೆಯುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್‌ಗಳು ಭಾರತದ 10 ವಿಕೆಟ್‌ಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದರು. ಇತ್ತ ಭಾರತದ ಸ್ಪಿನ್ನರ್‌ಗಳು 8 ವಿಕೆಟ್‌ಗಳಲ್ಲಿ 4 ವಿಕೆಟ್ ಪಡೆದರೆ, ವೇಗದ ಬೌಲರ್‌ಗಳು ಸಮಾನಾದ ಪಲಿತಾಂಶ ಕಂಡಿದ್ದರು.
ಭಾರತ ಮತ್ತು ಶ್ರೀಲಂಕಾ ಇದುವರೆಗೆ ಪರಸ್ಪರ 169 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ 99ಪಂದ್ಯಗಳಲ್ಲಿ ಗೆದ್ದಿದ್ದರೆ, ಶ್ರೀಲಂಕಾ 57ಪಂದ್ಯಗಳಲ್ಲಿ ಗೆದ್ದಿದೆ. ಉಳಿದಂತೆ 12 ಪಂದ್ಯಗಳಲ್ಲಿ ಫಲಿತಾಂಶವಿಲ್ಲದೆ ಕೊಮನೆಗೊಂಡಿವೆ.
ಏಕದಿನ ಸರಣಿಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ