IND vs SL: ಭಾರತ ತಂಡದಲ್ಲಿ 6 ಕೆಕೆಆರ್ ಆಟಗಾರರು; ಫೇವರಿಸಂ ಶುರು ಮಾಡಿದ್ರಾ ಕೋಚ್ ಗಂಭೀರ್?

|

Updated on: Jul 19, 2024 | 3:54 PM

India Squad for Sri Lanka tour: ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಪ್ರವಾಸದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ. ಆದರೆ, ಈ ಪ್ರವಾಸಕ್ಕೆ ಭಾರರತ ತಂಡದಲ್ಲಿ 6 ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರು ಆಯ್ಕೆಯಾಗಿರುವುದು ದೊಡ್ಡ ವಿಷಯ. ಅಂದರೆ ಗಂಭೀರ್ ಕೋಚ್ ಆದ ಕೂಡಲೇ ಕೆಕೆಆರ್ ಆಟಗಾರರ ಹಣೆಬರಹವೇ ಬದಲಾದಂತ್ತಾಗಿದೆ.

IND vs SL: ಭಾರತ ತಂಡದಲ್ಲಿ 6 ಕೆಕೆಆರ್ ಆಟಗಾರರು; ಫೇವರಿಸಂ ಶುರು ಮಾಡಿದ್ರಾ ಕೋಚ್ ಗಂಭೀರ್?
ಗೌತಮ್ ಗಂಭೀರ್
Follow us on

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಜುಲೈ 27ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಟೀಂ ಇಂಡಿಯಾ ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಏಕದಿನದಲ್ಲಿ ರೋಹಿತ್ ಶರ್ಮಾ ತಂಡದ ನಾಯಕನಾಗಿದ್ದರೆ, ಸೂರ್ಯಕುಮಾರ್ ಯಾದವ್‌ಗೆ ಟಿ20 ತಂಡದ ಜವಾಬ್ದಾರಿಯನ್ನು ನೀಡಲಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಪ್ರವಾಸದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ. ಆದರೆ, ಈ ಪ್ರವಾಸಕ್ಕೆ ಭಾರತ ತಂಡದಲ್ಲಿ 6 ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರು ಆಯ್ಕೆಯಾಗಿರುವುದು ದೊಡ್ಡ ವಿಷಯ. ಅಂದರೆ ಗಂಭೀರ್ ಕೋಚ್ ಆದ ಕೂಡಲೇ ಕೆಕೆಆರ್ ಆಟಗಾರರ ಹಣೆಬರಹವೇ ಬದಲಾದಂತ್ತಾಗಿದೆ.

ನೆಚ್ಚಿನ ಆಟಗಾರರ ಆಯ್ಕೆ?

ಶ್ರೀಲಂಕಾ ಪ್ರವಾಸಕ್ಕೆ ಬಿಸಿಸಿಐ ಎರಡು ತಂಡಗಳನ್ನು ಪ್ರಕಟಿಸಿದೆ. ಒಂದು ತಂಡ ಟಿ20 ಸರಣಿ ಆಡಲಿದ್ದು, ಇನ್ನೊಂದು ತಂಡ ಏಕದಿನದಲ್ಲಿ ಭಾಗವಹಿಸಲಿದೆ. ಈ ಸರಣಿಯೊಂದಿಗೆ ಭಾರತ ತಂಡದ ಅಧಿಕೃತ ಕೋಚ್ ಎನಿಸಿಕೊಳ್ಳಲ್ಲಿರುವ ಗಂಭೀರ್, ಈ ಎರಡು ಸರಣಿಗಳಿಗೆ ತಂಡದಲ್ಲಿ 6 ಮಂದಿ ಕೆಕೆಆರ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲರೂ ಗಂಭೀರ್ ಅವರ ನಾಯಕತ್ವ ಅಥವಾ ಮಾರ್ಗದರ್ಶನದಲ್ಲಿ ಒಂದಲ್ಲ ಒಂದು ಬಾರಿ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಆಡಿದ ಆಟಗಾರರಾಗಿದ್ದಾರೆ.

ಫಾರ್ಮ್​ನಲ್ಲಿರದ ಅಯ್ಯರ್ ಆಯ್ಕೆ

ಇದರಲ್ಲಿ ಮೊದಲ ಹೆಸರು ಹಾಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರದ್ದು. ಸುಮಾರು 8 ತಿಂಗಳಿಂದ ಅಯ್ಯರ್ ಭಾರತ ತಂಡದಿಂದ ಹೊರಗಿದ್ದಾರೆ. ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಕೇಂದ್ರ ಗುತ್ತಿಗೆಯಿಂದಲೂ ಅವರನ್ನು ತೆಗೆದುಹಾಕಿತ್ತು. ಆದರೆ ಗಂಭೀರ್ ಕೋಚ್ ಆದ ಕೂಡಲೇ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ವಾಸ್ತವವಾಗಿ ಅಯ್ಯರ್ ಅವರನ್ನು ಟೀಂ ಇಂಡಿಯಾದಿಂದ ಹೊರಗಿಟ್ಟ ಬಳಿಕ ಅವರಿಗೆ ರಣಜಿ ಆಡುವಂತೆ ಮಂಡಳಿ ಸೂಚಿಸಿತ್ತು. ಆ ವೇಳೆ ಗಂಭೀರ್ ಕೂಡ ಬಿಸಿಸಿಐ ಸೂಚನೆಯ ಪರವಾಗಿ ಬ್ಯಾಟ್ ಬೀಸಿದ್ದರು. ಆದರೆ ಕೋಚ್ ಆದ ಬಳಿಕ ಉಲ್ಟಾ ಹೊಡೆದಿರುವ ಗಂಭೀರ್, ಅಯ್ಯರ್​ಗೆ ತಂಡದಲ್ಲಿ ಅವಕಾಶ ನೀಡಿದ್ದಾರೆ. ಆದರೆ ಅಯ್ಯರ್​ ಅಂತೆಯೇ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಇಶಾನ್ ಕಿಶನ್​ಗೆ ಮಾತ್ರ ಅವಕಾಶ ನೀಡುವ ಕೆಲಸವನ್ನು ಗಂಭೀರ್ ಮಾಡಿಲ್ಲ.

ಸೂರ್ಯನಿಗೆ ನಾಯಕತ್ವ ಪಟ್ಟ

ಈ ಪಟ್ಟಿಯಲ್ಲಿ ಎರಡನೇ ದೊಡ್ಡ ಹೆಸರು ಸೂರ್ಯಕುಮಾರ್ ಯಾದವ್ ಅವರದು. ಸೂರ್ಯ ಕೂಡ ಈ ಹಿಂದೆ ಕೆಕೆಆರ್‌ ಪರ ಆಡಿದ್ದಾರೆ. ಅಷ್ಟೇ ಅಲ್ಲ, ಗಂಭೀರ್ ಕೆಕೆಆರ್ ಪರ ಆಡುವಾಗ ತಮ್ಮ ನಾಯಕತ್ವದಲ್ಲಿ ಸೂರ್ಯ ಅವರನ್ನು ಉಪನಾಯಕನನ್ನಾಗಿ ಮಾಡಿದ್ದರು. ಇದೀಗ ಟೀಂ ಇಂಡಿಯಾಕ್ಕೆ ಕೋಚ್ ಆದ ಬಳಿಕ ಟಿ20 ತಂಡದ ನಾಯಕತ್ವದ ಅತಿ ದೊಡ್ಡ ಸ್ಪರ್ಧಿ ಹಾರ್ದಿಕ್ ಪಾಂಡ್ಯ ಅವರನ್ನು ಬದಿಗೊತ್ತಿ ಸೂರ್ಯರನ್ನು ತಂಡದ ನಾಯಕರನ್ನಾಗಿ ಮಾಡಿದ್ದಾರೆ.

ಉಳಿದವರ ಪಟ್ಟಿ ಹೀಗಿದೆ

ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ದೊಡ್ಡ ಹೆಸರುಗಳಲ್ಲದೆ, ರಿಂಕು ಸಿಂಗ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ಶುಭ್​ಮನ್ ಗಿಲ್ ಕೂಡ ಕೆಕೆಆರ್ ಪರ ಆಡಿದ್ದಾರೆ. ಶುಭ್‌ಮನ್ ಗಿಲ್ ಅವರನ್ನು ಏಕದಿನ ಮತ್ತು ಟಿ20 ಎರಡರಲ್ಲೂ ಉಪನಾಯಕರನ್ನಾಗಿ ಮಾಡಲಾಗಿದೆ. ಇದರಲ್ಲಿ ಗಂಭೀರ್ ಪಾತ್ರವಿರುವ ಸಾಧ್ಯತೆ ಇದೆ. ಗಿಲ್‌ಗೆ ನಾಯಕತ್ವದ ಅನುಭವವಿಲ್ಲ, ಆದರೂ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಆದರೆ ಗಿಲ್​ಗಿಂತಲೂ ನಾಯಕತ್ವದಲ್ಲಿ ಅನುಭವ ಹೊಂದಿರುವ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಈ ಸ್ಥಾನಕ್ಕೆ ಪರಿಗಣಿಸಲಾಗಿಲ್ಲ ಎಂಬುದು ಅಚ್ಚರಿಯ ಸಂಗತಿ.

ಇನ್ನು ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಜಿಂಬಾಬ್ವೆ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್ ತಂಡದಿಂದ ಹೊರಗುಳಿದಿದ್ದಾರೆ. ಇದಲ್ಲದೇ ಅಭಿಷೇಕ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಕೂಡ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Fri, 19 July 24