ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ ಬಲಿಷ್ಠ ಪುನರಾಗಮನ ಮಾಡಿದೆ. ಎರಡನೇ ಪಂದ್ಯವನ್ನು 100 ರನ್‌ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ಇದೀಗ 5 ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ 23 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್‌ಗೆ 182 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ 6 ವಿಕೆಟ್‌ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ರವಿ ಬಿಷ್ಣೋಯ್ ಹಿಡಿದ ಅದೊಂದು ಅತ್ಯುತ್ತಮ ಕ್ಯಾಚ್ ಪಂದ್ಯದ ಹೈಲೇಟ್ ಎನಿಸಿಕೊಂಡಿತು.
ವಾಸ್ತವವಾಗಿ ಜಿಂಬಾಬ್ವೆ ಇನ್ನಿಂಗ್ಸ್ನ ನಾಲ್ಕನೇ ಓವರ್ ಈ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಯಿತು. ಅವೇಶ್ ಖಾನ್ ಬೌಲ್ ಮಾಡಿದ ಈ ಓವರ್ನ ಮೊದಲ ಎಸೆತವನ್ನು, ಬ್ರಿಯಾನ್ ಬೆನೆಟ್ ಪಾಯಿಂಟ್ ಕಡೆಗೆ ಬಾರಿಸಿದರು. ಚೆಂಡು ಬೌಂಡರಿ ದಾಟುವಂತೆ ಕಾಣುತ್ತಿತ್ತು. ಆದರೆ ಇಲ್ಲಿ ನಿಂತಿದ್ದ ರವಿ ಬಿಷ್ಣೋಯ್, ಮೇಲಕ್ಕೆ ನೆಗೆದು ಅದ್ಭುತ ಕ್ಯಾಚ್ ಹಿಡಿದರು. ಬಿಷ್ಣೋಯ್ ಅವರ ಈ ಸೂಪರ್‌ಮ್ಯಾನ್ ಅವತಾರವನ್ನು ನೋಡಿ ತಂಡದ ಸಹ ಆಟಗಾರರು ಕೂಡ ಬೆರಗಾದರು. ಈ ಮೂಲಕ ಬಿಷ್ಣೋಯ್ ಅವರ ಅತ್ಯುತ್ತಮ ಫೀಲ್ಡಿಂಗ್ನಿಂದಾಗಿ ಬೆನೆಟ್ ಕೇವಲ 4 ರನ್ ಗಳಿಗೆ ಪೆವಿಲಿಯನ್ಗೆ ಮರಳಬೇಕಾಯಿತು.
.@bishnoi0056 takes a STUNNER 🤯 👏#SonySportsNetwork #ZIMvIND #TeamIndia pic.twitter.com/GuE51tA6Pi
— Sony Sports Network (@SonySportsNetwk) July 10, 2024
ಈ ಪಂದ್ಯದಲ್ಲಿ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದ ಬಿಷ್ಣೋಯ್ಗೆ ಈ ಪಂದ್ಯದಲ್ಲಿ ಒಂದೂ ವಿಕೆಟ್ ಬೀಳಲಿಲ್ಲ. ತಮ್ಮ ಖೋಟಾದ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಿದ ಅವರು ತುಂಬಾ ದುಬಾರಿಯಾಗಿದ್ದಲ್ಲದೆ 37 ರನ್ ನೀಡಿದರು. ಬಿಷ್ಣೋಯ್ ಮೊದಲ ಪಂದ್ಯದಲ್ಲಿ 13 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಎರಡನೇ ಪಂದ್ಯದಲ್ಲೂ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ 23 ರನ್‌ಗಳಿಂದ ಸೋಲನುಭವಿಸಿತು. ಟೀಂ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ 36 ರನ್, ನಾಯಕ ಶುಭ್ಮನ್ ಗಿಲ್ 66 ರನ್, ಅಭಿಷೇಕ್ ಶರ್ಮಾ 10 ರನ್, ರುತುರಾಜ್ ಗಾಯಕ್ವಾಡ್ 49 ರನ್ ಮತ್ತು ಸಂಜು ಸ್ಯಾಮ್ಸನ್ 12 ರನ್ ಕೊಡುಗೆ ನೀಡಿದರು. ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ವಾಷಿಂಗ್ಟನ್ ಸುಂದರ್ 4 ಓವರ್‌ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರು. ಅವೇಶ್ ಖಾನ್ 2 ಮತ್ತು ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ