IND vs ZIM: ನಿನ್ನೆ 102 ರನ್​ಗಳಿಗೆ ಆಲೌಟ್; ಇಂದು ದಾಖಲೆಯ 234 ರನ್ ಚಚ್ಚಿದ ಟೀಂ ಇಂಡಿಯಾ..!

|

Updated on: Jul 07, 2024 | 6:37 PM

IND vs ZIM: ಹರಾರೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಾಖಲೆಯ ಮೊತ್ತವನ್ನು ಕಲೆಹಾಕಿದೆ. ನಿಗದಿತ 20 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗಳನ್ನು ಕಳೆದುಕೊಂಡ ಟೀಂ ಇಂಡಿಯಾ ಬರೋಬ್ಬರಿ 234 ರನ್ ಬಾರಿಸಿದೆ.

IND vs ZIM: ನಿನ್ನೆ 102 ರನ್​ಗಳಿಗೆ ಆಲೌಟ್; ಇಂದು ದಾಖಲೆಯ 234 ರನ್ ಚಚ್ಚಿದ ಟೀಂ ಇಂಡಿಯಾ..!
ಟೀಂ ಇಂಡಿಯಾ
Follow us on

ಹರಾರೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಾಖಲೆಯ ಮೊತ್ತವನ್ನು ಕಲೆಹಾಕಿದೆ. ನಿಗದಿತ 20 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗಳನ್ನು ಕಳೆದುಕೊಂಡ ಟೀಂ ಇಂಡಿಯಾ ಬರೋಬ್ಬರಿ 234 ರನ್ ಬಾರಿಸಿದೆ. ವಾಸ್ತವವಾಗಿ ಇದೇ ಮೈದಾನದಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಕೇವಲ 115 ರನ್ ಬಾರಿಸಲಾಗದೆ, 102 ರನ್​ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ಇಂದು ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿದೆ. ಹರಾರೆ ಮೈದಾನದಲ್ಲಿ ಟೀಂ ಇಂಡಿಯಾ, 234 ಕಲೆಹಾಕುವ ಮೂಲಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ಸೃಷ್ಟಿಸಿದೆ. ಇದಕ್ಕೂ ಮುನ್ನ 229 ರನ್ ಬಾರಿಸಿದ್ದ ಆಸ್ಟ್ರೇಲಿಯಾದ ಹೆಸರಿನಲ್ಲಿ ಈ ದಾಖಲೆ ಇತ್ತು.

ಅಭಿಷೇಕ್ ಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಆದರೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ ಕೇವಲ 10 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ರೂಪದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಕೆಟ್ಟ ಆರಂಭದ ನಂತರ, ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಂಡದ ಇನ್ನಿಂಗ್ಸ್ ನಿಭಾಯಿಸಿ ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದರು.

137 ರನ್‌ಗಳ ಜೊತೆಯಾಟ

ಅಭಿಷೇಕ್ ತಮ್ಮ ವೃತ್ತಿಜೀವನದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 100 ರನ್ ಬಾರಿಸಿದರು. ಆದರೆ ಆ ನಂತರದ ಎಸೆತದಲ್ಲಿ ಅಭಿಷೇಕ್ ಕ್ಯಾಚಿತ್ತು ಔಟಾದರು. ಈ ವೇಳೆಗೆ ಅಭಿಷೇಕ್ ಎರಡನೇ ವಿಕೆಟ್‌ಗೆ ಗಾಯಕ್ವಾಡ್ ಅವರೊಂದಿಗೆ 137 ರನ್‌ಗಳ ಜೊತೆಯಾಟವನ್ನು ನಡೆಸಿದರು. ಆ ನಂತರ ಜೊತೆಯಾದ ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ರುತುರಾಜ್ ಅರ್ಧಶತಕ

ಈ ವೇಳೆ ರುತುರಾಜ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಬಾರಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ, ರಿಂಕು ಸಿಂಗ್ ಕೂಡ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 48 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. ಜಿಂಬಾಬ್ವೆ ಪರ ಮುಜರಬಾನಿ ಹಾಗೂ ವೆಲ್ಲಿಂಗ್ಟನ್ ಮಸಕಡ್ಜಾ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Sun, 7 July 24