
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 6 ರಿಂದ ಅರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಇದುವರೆಗಿನ ಮುಖಾಮುಖಿ ದಾಖಲೆ ಹಾಗೂ ತಂಡಗಳ ಬಲಾಬಲವನ್ನು ಗಮನಿಸಿರೆ, ಟೀಂ ಇಂಡಿಯಾ ಮೇಲುಗೈ ಸಾಧಿಸುವಂತೆ ತೋರುತ್ತದೆ. ಆದರೆ ಉಭಯ ತಂಡಗಳ ಕೊನೆಯ ಟಿ20 ಮುಖಾಮುಖಿಯ ಫಲಿತಾಂಶವನ್ನು ನೋಡಿದರೆ, ವಿಂಡೀಸ್ ಪಡೆ ಭಾರತ ತಂಡಕ್ಕೆ ಮರೆಯಾಗದ ಆಘಾತ ನೀಡಿದೆ. ಹೀಗಾಗಿ ಟೀಂ ಇಂಡಿಯಾ ಕಳೆದ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.
ಎರಡೂ ತಂಡಗಳ ಕೊನೆಯ ಬಾರಿಗೆ 2023 ರಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದವು. ಆ ಸರಣಿಯಲ್ಲಿ, ವೆಸ್ಟ್ ಇಂಡೀಸ್ ಮೊದಲ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆ ಪಡೆದುಕೊಂಡಿತ್ತು. ಆದಾಗ್ಯೂ ಭಾರತ ತಂಡ ಬಲವಾದ ಪುನರಾಗಮನ ಮಾಡಿ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು. ಆದರೆ ಐದನೇ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಏಕಪಕ್ಷೀಯ ಗೆಲುವು ಸಾಧಿಸಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಸರಣಿಯನ್ನು 3-2 ರಿಂದ ಗೆದ್ದುಕೊಂಡಿತ್ತು.
ಆ ಕಹಿ ಸೋಲಿನ ನೋವು ಇನ್ನೂ ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದೆ, ಅದಕ್ಕಾಗಿಯೇ ಈ ಬಾರಿ ಟೀಂ ಇಂಡಿಯಾ ಅತ್ಯಂತ ಜಾಗರೂಕರಾಗಿರಬೇಕು. ವೆಸ್ಟ್ ಇಂಡೀಸ್ ಯಾವುದೇ ಕ್ಷಣದಲ್ಲಿ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಭಾರತದ ವಿರುದ್ಧದ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ ಸೋತರೂ, ಸರಣಿಯ ಅಂತಿಮ ಪಂದ್ಯದಲ್ಲಿ 352 ರನ್‌ಗಳನ್ನು ಬೆನ್ನಟ್ಟುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.
ಇನ್ನು ಟಿ20 ಸರಣಿಯಲ್ಲಿ ಭಾರತ ಹಾಗೂ ವಿಂಡೀಸ್ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಉಭಯ ತಂಡಗಳು 2009 ರಲ್ಲಿ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 31 ಟಿ20 ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಭಾರತ 20 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 2026 ರ ಟಿ20 ವಿಶ್ವಕಪ್‌ನ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಟಿ20 ಸರಣಿ ಆರಂಭಕ್ಕೂ ಮುನ್ನವೇ ಭಾರತ- ವಿಂಡೀಸ್ ತಂಡಗಳಿಗೆ ದಂಡದ ಬರೆ ಎಳೆದ ಐಸಿಸಿ..!
ಕೆರಿಬಿಯನ್ ತಂಡದ ವಿರುದ್ಧ ಭಾರತ ತಂಡದ ತವರು ದಾಖಲೆ ಅದ್ಭುತವಾಗಿದೆ. ಭಾರತದ ನೆಲದಲ್ಲಿ ಇದುವರೆಗೆ ಎರಡೂ ತಂಡಗಳ ನಡುವೆ ಒಟ್ಟು 11 ಟಿ20 ಪಂದ್ಯಗಳು ನಡೆದಿವೆ. ಈ 11 ಪಂದ್ಯಗಳಲ್ಲಿ ಭಾರತ ಒಂಬತ್ತು ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಹೀಗಾಗಿ ಭಾರತದಲ್ಲಿ ಟೀಂ ಇಂಡಿಯಾವನ್ನು ಮಣಿಸುವುದು ವಿಂಡೀಸ್ಗೆ ಕಷ್ಟಕರವಾಗಿದ್ದರೂ, ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ವಿಂಡೀಸ್ ಆಟಗಾರರಿಗೆ ಭಾರತದ ಪರಿಸ್ಥಿತಿಗಳು ಪರಿಚಿತವಾಗಿದೆ. ಹೀಗಾಗಿ ಶ್ರೇಯಸ್ ಪಡೆ ಎಚ್ಚರಿಕೆಯಿಂದ ವಿಂಡೀಸ್ ತಂಡವನ್ನು ಎದುರಿಸಬೇಕಿದೆ.