ಟಿ20 ಸರಣಿ ಆರಂಭಕ್ಕೂ ಮುನ್ನವೇ ಭಾರತ- ವಿಂಡೀಸ್ ತಂಡಗಳಿಗೆ ದಂಡದ ಬರೆ ಎಳೆದ ಐಸಿಸಿ..!
ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಣಕ್ಕೆ ಐಸಿಸಿ ಎರಡೂ ತಂಡಗಳಿಗೆ ದಂಡ ವಿಧಿಸಿದೆ. ಭಾರತಕ್ಕೆ ಪಂದ್ಯ ಶುಲ್ಕದ 20% ಹಾಗೂ ವೆಸ್ಟ್ ಇಂಡೀಸ್‌ಗೆ 10% ದಂಡ ವಿಧಿಸಲಾಗಿದೆ. ಭಾರತ 4 ಓವರ್ ಕಡಿಮೆ ಬೌಲಿಂಗ್ ಮಾಡಿದ್ದರೆ, ವೆಸ್ಟ್ ಇಂಡೀಸ್ 2 ಓವರ್ ಕಡಿಮೆ ಬೌಲಿಂಗ್ ಮಾಡಿದೆ. ನಾಯಕರು ಆರೋಪ ಒಪ್ಪಿಕೊಂಡಿದ್ದು, ಯಾವುದೇ ವಿಚಾರಣೆ ಇಲ್ಲದೆ ಶಿಕ್ಷೆ ಜಾರಿಯಾಗಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಅಂತ್ಯವಾಗಿದೆ. ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಭಾರತ, ಕೊನೆಯ ಪಂದ್ಯದಲ್ಲಿ ಎಡವಿತು. ಅದಾಗ್ಯೂ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮಾಡಿದ ತಪ್ಪಿಗೆ ಐಸಿಸಿ, ಎರಡೂ ತಂಡಗಳನ್ನು ಶಿಕ್ಷಿಸಿದೆ. ಸೆಪ್ಟೆಂಬರ್ 3 ರ ಶನಿವಾರ ಮುಲ್ಲನ್‌ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ, ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ನಿಗದಿತ ಸಮಯಕ್ಕೆ ಸರಿಯಾಗಿ ಓವರ್ ಮುಗಿಸಲಿಲ್ಲ. ಹೀಗಾಗಿ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ತಂಡಗಳಿಗೂ ಐಸಿಸಿ ದಂಡ ವಿಧಿಸಿದೆ.
ಭಾರತ- ವಿಂಡೀಸ್ ತಂಡಗಳಿಗೆ ದಂಡ
ಏಕದಿನ ಸರಣಿಯ ಅಂತಿಮ ಪಂದ್ಯದ ನಂತರ ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಐಸಿಸಿ, ಎರಡೂ ತಂಡಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತ ತಂಡಕ್ಕೆ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದರೆ, ವೆಸ್ಟ್ ಇಂಡೀಸ್ ತಂಡಕ್ಕೆ ಶೇಕಡಾ 10 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿದೆ. ಭಾರತ ನಿಗದಿತ ಸಮಯಕ್ಕಿಂತ ನಾಲ್ಕು ಓವರ್‌ಗಳು ಕಡಿಮೆ ಬೌಲಿಂಗ್ ಮಾಡಿದ್ದರೆ, ವೆಸ್ಟ್ ಇಂಡೀಸ್ ಕನಿಷ್ಠ ಓವರ್‌ಗಳ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಐಸಿಸಿಯ ಅಂತರರಾಷ್ಟ್ರೀಯ ಪಂದ್ಯ ರೆಫರಿಗಳ ಸಮಿತಿಯ ಪ್ರಕಾಶ್ ಭಟ್ ಎರಡೂ ತಂಡಗಳಿಗೆ ದಂಡ ವಿಧಿಸಿದ್ದಾರೆ.
ತಪ್ಪು ಒಪ್ಪಿಕೊಂಡ ನಾಯಕರು
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ನಿಗದಿತ ಸಮಯಕ್ಕಿಂತ ಕಡಿಮೆ ಓವರ್ ಬೌಲ್ ಮಾಡಿದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ. ಈ ನಿಯಮದಡಿಯಲ್ಲಿ, ನಾಲ್ಕು ಓವರ್‌ಗಳು ಕಡಿಮೆ ಬೌಲ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ಶೇಕಡಾ 20 ರಷ್ಟು ಮತ್ತು ಎರಡು ಓವರ್‌ಗಳು ಕಡಿಮೆ ಬೌಲ್ ಮಾಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಶೇಕಡಾ 10 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್‌ನ ನಾಯಕರು ಈ ಆರೋಪವನ್ನು ಒಪ್ಪಿಕೊಂಡಿದ್ದು, ಐಸಿಸಿ ಪ್ರಸ್ತಾಪಿಸಿದ ಶಿಕ್ಷೆವನ್ನು ಒಪ್ಪಿಕೊಂಡಿದ್ದಾರೆ. ಇಬ್ಬರೂ ಆಟಗಾರರು ತಪ್ಪೊಪ್ಪಿಕೊಂಡ ಕಾರಣ, ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
The ICC have handed down sanctions to both sides following the third and final ODI between India and West Indies 🏏
https://t.co/CkqdR9hLxk
— ICC (@ICC) October 5, 2026
ಪಂದ್ಯ ಹೀಗಿತ್ತು
ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ವೆಸ್ಟ್ ಇಂಡೀಸ್‌ಗೆ 352 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ಪರ ನಾಯಕ ಶೈ ಹೋಪ್ ಅಜೇಯ 162 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಇನ್ನು 10 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಸರಣಿಯನ್ನು ಗೆದ್ದಿತ್ತು. ಆದಾಗ್ಯೂ, ಅಂತಿಮ ಪಂದ್ಯದ ಸೋಲಿನಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ.




