ಭಾರತ-ಅಫ್ಘನ್ ನಡುವಿನ ಟಿ20 ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ

India vs Afghanistan T20 Series: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಭಾರತ-ಅಫ್ಘಾನಿಸ್ತಾನ ಟಿ20 ಸರಣಿಯ ವೇಳಾಪಟ್ಟಿ ಬದಲಾವಣೆಗೆ ಅಫ್ಘಾನ್ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಸಲ್ಲಿಸಿದೆ. ಮೂಲತಃ ಸೆಪ್ಟೆಂಬರ್ 13, 15, 17ರಂದು ನಿಗದಿಯಾಗಿದ್ದ ಸರಣಿಯು ಈಗ ಸೆಪ್ಟೆಂಬರ್ 11, 13, 14ಕ್ಕೆ ಬದಲಾಗುವ ಸಾಧ್ಯತೆ ಇದೆ. ಗಣೇಶ ಚತುರ್ಥಿಯಂದು ಅಂತಿಮ ಪಂದ್ಯ ನಡೆಸಲು ಮನವಿ ಮಾಡಲಾಗಿದೆ. ಅಧಿಕೃತ ಪ್ರಕಟಣೆಗಾಗಿ ಕಾಯಲಾಗುತ್ತಿದೆ.

ಭಾರತ-ಅಫ್ಘನ್ ನಡುವಿನ ಟಿ20 ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ
Ind Vs Afg

Updated on: Aug 21, 2026 | 6:56 PM

ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಆಗಸ್ಟ್ 12 ರಂದು ಬಿಡುಗಡೆ ಮಾಡಿತ್ತು. ಈ ಅಧಿಕೃತ ವೇಳಾಪಟ್ಟಿಯ ಪ್ರಕಾರ, ಮೂರು ಪಂದ್ಯಗಳು ಕ್ರಮವಾಗಿ ಸೆಪ್ಟೆಂಬರ್ 13, 15 ಮತ್ತು 17 ರಂದು ನಡೆಯಲಿವೆ. ಈ ಮೂರು ಪಂದ್ಯಗಳಿಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವಹಿಸಲಿದೆ ಎಂಬ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಅಲ್ಲದೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಬಿಸಿಸಿಐನಿಂದ ದಿನಾಂಕ ಬದಲಾವಣೆಯನ್ನು ಕೋರಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ವೇಳಾಪಟ್ಟಿಯಲ್ಲಿನ ಬದಲಾವಣೆಗಳೇನು?

ವರದಿಯ ಪ್ರಕಾರ ಅಫ್ಘಾನಿಸ್ತಾನ ಮಂಡಳಿಯು ಸರಣಿಯನ್ನು ಸ್ವಲ್ಪ ಮುಂಚಿತವಾಗಿ ನಡೆಸಲು ಮುಂದಾಗಿದೆ. ಅಂದರೆ ಸೆಪ್ಟೆಂಬರ್ 13 ರ ಬದಲು ಸೆಪ್ಟೆಂಬರ್ 11 ರಿಂದ ಸರಣಿಯನ್ನು ಆರಂಭಿಸುವ ಇರಾದೆ ಅಫ್ಘನ್ ಕ್ರಿಕೆಟ್​ ಮಂಡಳಿಗಿದೆ. ಅಲ್ಲದೆ ಸರಣಿಯ ಕೊನೆಯ ಪಂದ್ಯವನ್ನು ಗಣೇಶ ಚತುರ್ಥಿಯಂದು ಅಂದರೆ ಸೆಪ್ಟೆಂಬರ್ 14 ರಂದು ನಡೆಸಲು ಸಹ ಬಿಸಿಸಿಐಗೆ ವಿನಂತಿಸಿದೆ. ಇದರ ಪ್ರಕಾರ ನಡೆದರೆ, ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 11 ರಂದು, ಎರಡನೇ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ಮತ್ತು ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಆದಾಗ್ಯೂ ವೇಳಾಪಟ್ಟಿಯ ಬದಲಾವಣೆಯ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.

ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ

ಏಕದಿನ, ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಯ

ಜೂನ್ 6 ರಿಂದ 20 ರ ನಡುವೆ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಸರಣಿ ನಡೆದಿತ್ತು. ಎರಡೂ ತಂಡಗಳ ನಡುವೆ ನಡೆದ ಏಕೈಕ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಜಯಗಳಿಸಿತು.

ಇದರ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆದಿತ್ತು. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡರೆ, ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿಯೂ ಟೀಂ ಇಂಡಿಯಾ 170 ರನ್‌ಗಳಿಂದ ಜಯಗಳಿಸಿತ್ತು. ನಂತರ, ಚೆನ್ನೈನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ, ಮೆನ್ ಇನ್ ಬ್ಲೂ 9 ವಿಕೆಟ್‌ಗಳಿಂದ ಜಯಗಳಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Fri, 21 August 26

Loading...
Unable to load recommendations.
Follow Us