
ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಅಮಾಯಕ ಭಾರತೀಯರ ಪ್ರಾಣ ಹರಣ ಮಾಡಿದ ಬಳಿಕ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳಿಗೂ ಭಾರತ ಅಂತ್ಯ ಹಾಡಿದೆ. ಇದರಿಂದಾಗಿ ಎರಡೂ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಪಂದ್ಯಕ್ಕೂ ಬ್ರೇಕ್ ಬಿದ್ದಿದೆ. ಮಾತ್ರವಲ್ಲದೆ ಭಾರತ ತಂಡ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ (India vs Pakistan) ಪ್ರಯಾಣಿಸಲು ಒಲ್ಲೆ ಎಂದರೆ, ಇತ್ತ ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದೆ. ಏತನ್ಮಧ್ಯೆ, ಭಾರತ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಪಾಕಿಸ್ತಾನಿ ಆಟಗಾರರು ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಿದೆ. ಭಾರತ ಸರ್ಕಾರದ ಪ್ರಕಾರ, ಪಾಕಿಸ್ತಾನಿ ಆಟಗಾರರು ಬಹು ದೇಶಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಈವೆಂಟ್ಗಳಲ್ಲಿ ಅಂದರೆ ಐಸಿಸಿ (ICC) ಹಾಗೂ ಎಸಿಸಿ (ACC) ಈವೆಂಟ್ಗಳಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ.
“ಭಾರತ ಆಯೋಜಿಸುವ ಬಹು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಕಿಸ್ತಾನಿ ಆಟಗಾರರು ಭಾಗವಹಿಸಲು ಅನುಮತಿ ನೀಡಲಾಗುತ್ತಿದೆ. ಆದರೆ ಭಾರತ ತಂಡವನ್ನು ಮಾತ್ರ ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ” ಎಂದು ಭಾರತ ಸರ್ಕಾರ ಹೇಳಿದೆ. ಇದರರ್ಥ ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ ಅಥವಾ ವಿಶ್ವಕಪ್ನಂತಹ ಪಂದ್ಯಾವಳಿಗಳು ಭಾರತದಲ್ಲಿ ನಡೆದರೆ ಪಾಕಿಸ್ತಾನಿ ಆಟಗಾರರಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳನ್ನು ನಡೆಸುವ ಮಾತೇ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಗಮನಿಸಬೇಕಾದ ಅಂಶವೆಂದರೆ, ಭಾರತ ಮತ್ತು ಪಾಕಿಸ್ತಾನ ಇತ್ತೀಚೆಗೆ ನಡೆದ ಎರಡು ಐಸಿಸಿ ಟೂರ್ನಿಗಳಿಗೆ ಪರಸ್ಪರರ ದೇಶಗಳಿಗೆ ಪ್ರಯಾಣಿಸಿಲ್ಲ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿತ್ತು, ಆದರೆ ಭಾರತ ತಂಡ ಯುಎಇಯಲ್ಲಿ ತನ್ನ ಪಂದ್ಯಗಳನ್ನು ಆಡಿತ್ತು. ಇತ್ತ ಭಾರತ ಆಯೋಜಿಸಿದ್ದ 2026 ರ ಟಿ20 ವಿಶ್ವಕಪ್ಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲಿಲ್ಲ. ಹೀಗಾಗಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಬೇಕಾಗಿತ್ತು. ಆದ್ದರಿಂದ, ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸುತ್ತದೆಯೇ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಅಸಂಭವವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ