Champions Trophy 2025: ಭಾರತ- ಬಾಂಗ್ಲಾದೇಶ ಪಂದ್ಯದ ಮೇಲೆ ಬೆಟ್ಟಿಂಗ್; ಮೂವರ ಬಂಧನ

Champions Trophy 2025: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಮೇಲೆ ಗೋವಾದಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಮಾಹಿತಿ ಪಡೆದ ಪೊಲೀಸರು ಒಂದು ಮನೆಯ ಮೇಲೆ ದಾಳಿ ಮಾಡಿ ಸ್ಥಳದಿಂದ ಮೂವರು ಯುವಕರನ್ನು ಬಂಧಿಸಿದ್ದಾರೆ. ಅವರಿಂದ ಒಂದು ಲ್ಯಾಪ್‌ಟಾಪ್ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Champions Trophy 2025: ಭಾರತ- ಬಾಂಗ್ಲಾದೇಶ ಪಂದ್ಯದ ಮೇಲೆ ಬೆಟ್ಟಿಂಗ್; ಮೂವರ ಬಂಧನ
Ind Vs Ban

Updated on: Feb 21, 2025 | 8:29 PM

2025 ರ ಚಾಂಪಿಯನ್ಸ್ ಟ್ರೋಫಿಗೆ ನಿರೀಕ್ಷಿತ ಆರಂಭ ಸಿಗದಿದ್ದರೂ, ಟೀಂ ಇಂಡಿಯಾ ಅಭಿಮಾನಿಗಳು ಏನನ್ನು ಬಯಸಿದ್ದರೋ ಆ ಪ್ರದರ್ಶನ ರೋಹಿತ್ ಪಡೆಯಿಂದ ಹೊರಹೊಮ್ಮಿದೆ. ಬಾಂಗ್ಲಾದೇಶ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದೆ. ಈ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಆದರೆ ಅದಕ್ಕೂ ಮುನ್ನ ಭಾರತದಲ್ಲಿ ಬೆಟ್ಟಿಂಗ್ ದಂಧೆ ಮತ್ತೆ ಶುರುವಾಗಿದೆ. ಅದಕ್ಕೆ ಪೂರಕವಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಮೂವರು ಯುವಕರ ಬಂಧನ

ಪಿಟಿಐ ವರದಿಯ ಪ್ರಕಾರ, ಗುರುವಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯ ನಡೆಯುತ್ತಿದ್ದಾಗ, ಪಣಜಿ ಬಳಿಯ ಪಿಲಾರ್ನೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಭಾರತ-ಬಾಂಗ್ಲಾದೇಶ ಪಂದ್ಯದ ಮೇಲೆ ಕೆಲವು ಯುವಕರು ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ದಾಳಿ ನಡೆಸಿ ಮೂವರು ಯುವಕರನ್ನು ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ, ಪೊಲೀಸರು ರಿಜ್ವಾನ್ ಭಾಷ್ (20), ಆಸಿಫ್ ಜಿಯಾವುದ್ದೀನ್ (25) ಮತ್ತು ಮಕ್ಸೂದ್ ಮೋಡನ್ (28) ಅವರನ್ನು ಬಂಧಿಸಿದ್ದು, ಈ ಮೂವರೂ ಗುಜರಾತ್ ನಿವಾಸಿಗಳು ಎಂದು ತಿಳಿದುಬಂದಿದೆ.

4 ಮೊಬೈಲ್‌, ಒಂದು ಲ್ಯಾಪ್‌ಟಾಪ್ ವಶಕ್ಕೆ

ಶುಕ್ರವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಈ ಬೆಟ್ಟಿಂಗ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಕ್ತಾರರ ಪ್ರಕಾರ, ವಿಶ್ವಾಸಾರ್ಹ ಮಾಹಿತಿ ಪಡೆದ ನಂತರ ಪೊಲೀಸರು ಗೋವಾದ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರು ಯುವಕರನ್ನು ಬಂಧಿಸಿದ್ದಾರೆ. ಪೊಲೀಸರು ಯುವಕರಿಂದ ಲ್ಯಾಪ್‌ಟಾಪ್, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ರೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 1.1 ಲಕ್ಷ ರೂ. ಎಂದು ಹೇಳಲಾಗುತ್ತಿದೆ.

6 ವಿಕೆಟ್‌ಗಳಿಂದ ಗೆದ್ದ ಭಾರತ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 228 ರನ್ ಗಳಿಸಿತು. ತಂಡದ ಪರ ತೌಹೀದ್ ಹೃದಯ್ 118 ಎಸೆತಗಳಲ್ಲಿ 100 ರನ್ ಗಳಿಸಿದರು. ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಮೂರು ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಭಾರತ 46.3 ಓವರ್‌ಗಳಲ್ಲಿ 21 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್‌ಗಳ ಗುರಿಯನ್ನು ತಲುಪಿತು. ಭಾರತದ ಪರ ಶುಭಮನ್ ಗಿಲ್ 129 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 36 ಎಸೆತಗಳಲ್ಲಿ 41 ರನ್, ಕೆಎಲ್ ರಾಹುಲ್ 47 ಎಸೆತಗಳಲ್ಲಿ 41 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ