ಆಗಸ್ಟ್ 26ರ ಶನಿವಾರದಂದು ನಡೆದ IBSA ವರ್ಲ್ಡ್ ಗೇಮ್ಸ್ 2023 (IBSA World Games 2023)ರ ಪುರುಷರ ಟಿ20 ಕ್ರಿಕೆಟ್ ಈವೆಂಟ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿದ ಭಾರತ (India vs Pakistan) ಪುರುಷರ ಅಂಧರ ಕ್ರಿಕೆಟ್ ತಂಡ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 184 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತ್ತಾದರೂ, ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಹೀಗಾಗಿ ಇದೇ ಪಾಕ್ ವಿರುದ್ಧ ಲೀಗ್ ಹಂತದಲ್ಲಿ ಸೋತಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡವನ್ನು ಮಣಿಸಿದ ಪಾಕಿಸ್ತಾನ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ವಾಸ್ತವವಾಗಿ IBSA ವರ್ಲ್ಡ್ ಗೇಮ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಟವನ್ನು ಸೇರಿಸಲಾಗಿತ್ತು. ಚೊಚ್ಚಲ ಆವೃತ್ತಿಯಲ್ಲೇ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ಅಂಧರ ತಂಡಗಳು ಫೈನಲ್‌ಗೆ ತಲುಪಿದ್ದವು. ಹೀಗಾಗಿ ಭಾರತ ಎರಡೂ ವಿಭಾಗದಲ್ಲೂ ಚಿನ್ನ ಗೆಲ್ಲುವ ಭರವಸೆ ಹೊಂದಿತ್ತು. ಇದಕ್ಕೆ ಪೂರಕವಾಗಿ ಶನಿವಾರ ಮುಂಜಾನೆ ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತಾ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದಡಿ ಸೋಲಿಸಿದ್ದ ಭಾರತ ವನಿತಾ ಪಡೆ, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಟ್ಟಿತ್ತು. ಆದರೆ ಪುರುಷರ ತಂಡವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್‌ಗಳ ಮುಜುಗರದ ಸೋಲನ್ನು ಅನುಭವಿಸಿತು.
ಇಂದು ಭಾರತ-ಪಾಕಿಸ್ತಾನ ಫೈನಲ್ ಫೈಟ್..! ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ವಿಆರ್ ದುನ್ನಾ ಮತ್ತು ಡಿಆರ್ ಟೊಂಪಕಿ ಸ್ಫೋಟಕ ಆರಂಭ ತಂದುಕೊಟ್ಟರು. ಈ ಇಬ್ಬರು ಮೊದಲ ಆರು ಓವರ್‌ಗಳಲ್ಲಿ 50 ರನ್‌ಗಳ ಜೊತೆಯಾಟ ಹಂಚಿಕೊಂಡರು. ದುನ್ನಾ 18 ಎಸೆತಗಳಲ್ಲಿ 20 ರನ್ ಗಳಿಸಿದರೆ, ಟೊಂಪಕಿ 51 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 76 ರನ್ ಗಳಿಸಿದರು. ಎಸ್ ರಮೇಶ್ ಅವರು 29 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ಭಾರತವನ್ನು 184 ರನ್‌ಗಳ ಸವಾಲಿನ ಮೊತ್ತಕ್ಕೆ ಕೊಂಡೊಯ್ದರು.
ಈ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಎಂ ಉಲ್ಲಾ ಮತ್ತು ಎನ್ ಅಲಿ ಕೇವಲ 27 ಎಸೆತಗಳಲ್ಲಿ 50 ರನ್ ಕಲೆ ಹಾಕುವುದರೊಂದಿಗೆ ಆರಂಭದಲ್ಲೇ ಟೀಂ ಇಂಡಿಯಾವನ್ನು ಸೋಲಿನ ದವಡೆಗೆ ತಳ್ಳಿದರು. ಒಂದೆಡೆ ಪಾಕ್ ಬ್ಯಾಟರ್ಗಳ ಅಬ್ಬರವಾದರೆ, ಮತ್ತೊಂದೆಡೆ ಅಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಭಾರತೀಯ ಬೌಲರ್‌ಗಳು 28 ವೈಡ್‌ಗಳನ್ನು ಒಳಗೊಂಡಂತೆ ಒಟ್ಟು 42 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು. ಅಂತಿಮವಾಗಿ ಎಂ ಸಲ್ಮಾನ್ 25 ಎಸೆತಗಳಲ್ಲಿ 48* ರನ್ ಮತ್ತು ಬಿ ಮುನೀರ್ 12 ಎಸೆತಗಳಲ್ಲಿ 41* ರನ್ ಗಳಿಸಿ ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 am, Sun, 27 August 23