Team India - Sunil Gavaskar
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ಇನ್ನುಳಿದಿರುವುದು ಕೇವಲ ದಿನಗಳು ಮಾತ್ರ. ನವೆಂಬರ್ 22 ರಿಂದ ಶುರುವಾಗಲಿರುವ 5 ಪಂದ್ಯಗಳ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯನ್ನು ಭಾರತ ತಂಡವು 4-0 ಅಂತರದಿಂದ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ಇಂತಹದೊಂದು ಗೆಲುವು ಅಸಾಧ್ಯ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್.
ಖಾಸಗಿ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸುವುದು ಅಸಾಧ್ಯದ ಮಾತು. ಹೀಗಾಗಿ ಅಮೋಘ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಕನಸನ್ನು ನೀವು ಬದಿಗಿಡಿ. ಬದಲಾಗಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವುದಕ್ಕೆ ಪ್ರಯತ್ನ ಮಾಡಿ ಎಂದು ಗವಾಸ್ಕರ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಗವಾಸ್ಕರ್, ಟೀಮ್ ಇಂಡಿಯಾ ಅಸಂಭವ ಗೆಲುವನ್ನು ತನ್ನದಾಗಿಸಿಕೊಳ್ಳುವ ಬಯಕೆಯನ್ನು ಬಿಟ್ಟು ಬಿಡುವುದು ಉತ್ತಮ. 4-0 ಅಂತರದ ಗೆಲುವಿನ ನಿರೀಕ್ಷೆ ಬಿಟ್ಟು, ಎರಡು ಅಥವಾ ಮೂರು ಪಂದ್ಯಗಳನ್ನು ಗೆದ್ದರೂ ಅದು ಗಮನಾರ್ಹ ಸಾಧನೆಯಾಗಲಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿ ಗೆಲುವಿನತ್ತ ಹೆಚ್ಚಿನ ಗಮನಹರಿಸಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ್ ವಿರುದ್ಧ ಆಸ್ಟ್ರೇಲಿಯಾಗೆ ದಾಖಲೆ ವಿಜಯ
ಟೀಮ್ ಇಂಡಿಯಾದ WTC ಫೈನಲ್ ಹಾದಿ:
- 5-0 ಅಥವಾ 4-0: ಭಾರತ ತಂಡವು ಆಸ್ಟ್ರೇಲಿಯಾವನ್ನು 5-0 ಅಥವಾ 4-0 ಅಂತರದಿಂದ ಮಣಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಖಚಿತವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪಂದ್ಯವನ್ನು ಸೋಲಬಾರದು. ಅಂದರೆ 5 ಮ್ಯಾಚ್ಗಳ ಸರಣಿಯಲ್ಲಿ 4 ಜಯ ಹಾಗು 1 ಡ್ರಾ ಸಾಧಿಸುವುದು ಅನಿವಾರ್ಯ.
- 4-1, 3-1, 3-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ ಅಥವಾ 3-1, 3-0 ಅಂತರದಿಂದ ಜಯ ಸಾಧಿಸಿದರೆ, ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಇಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ 4-1, 3-1, 3-0 ಅಂತರದಿಂದ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲಿದೆ.
- 2-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸಿ, 3 ಮ್ಯಾಚ್ಗಳನ್ನು ಡ್ರಾ ಮಾಡಿಕೊಂಡರೂ, ಫೈನಲ್ ಪ್ರವೇಶಿಸಲು ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ. ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಜಯ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ. ಇದರಿಂದ ಕಿವೀಸ್ ಪಡೆಯನ್ನು ಹಿಂದಿಕ್ಕಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.
- 3-2: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಜಯ ಸಾಧಿಸಿದರೆ, ಎರಡು ತಂಡಗಳ ಫಲಿತಾಂಶ ನಿರ್ಣಾಯಕವಾಗಲಿದೆ. ಅಂದರೆ ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಬೇಕು. ಹಾಗೆಯೇ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ನಲ್ಲಿ ಡ್ರಾ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ.