35 ತಿಂಗಳುಗಳ ಬಳಿಕ 36 ರನ್​ಗಳ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿ

|

Updated on: Dec 04, 2024 | 12:54 PM

India vs Australia: ಅಡಿಲೇಡ್​ನ ಓವಲ್​ ಮೈದಾನದಲ್ಲಿ ನಡೆದ ಈ ಹಿಂದಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾವನ್ನು 8 ವಿಕೆಟ್​​ಗಳಿಂದ ಸೋಲಿಸಿತ್ತು. ಇದೀಗ ಎರಡುವರೆ ವರ್ಷಗಳ ಬಳಿಕ ಉಭಯ ತಂಡಗಳು ಅದೇ ಮೈದಾನದಲ್ಲಿ ಡೇ-ನೈಟ್ ಟೆಸ್ಟ್ ಆಡಲು ಸಿದ್ಧವಾಗಿದೆ.

35 ತಿಂಗಳುಗಳ ಬಳಿಕ 36 ರನ್​ಗಳ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿ
Team India
Follow us on

ಬರೋಬ್ಬರಿ 35 ತಿಂಗಳ ಹಿಂದೆ… ಡಿಸೆಂಬರ್ 17, 2020 ರಂದು ಅಡಿಲೇಡ್​ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವು ಇಡೀ ವಿಶ್ವದ ಗಮನ ಸೆಳೆದಿತ್ತು. ಇದಕ್ಕೆ ಮುಖ್ಯ ಭಾರತ ತಂಡವು ಅದೇ ಮೊದಲ ಬಾರಿಗೆ ವಿದೇಶದಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವಾಡಲು ಕಣಕ್ಕಿಳಿದಿತ್ತು.

ಹೀಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಭಾರತ ತಂಡವು ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ (0) ಹಾಗೂ ಮಯಾಂಕ್ ಅಗರ್ವಾಲ್ (17) ಬೇಗನೆ ವಿಕೆಟ್ ಒಪ್ಪಿಸಿದರು.

ಆದರೆ ಆ ಬಳಿಕ ಬಂದ ಚೇತೇಶ್ವರ ಪೂಜಾರ 43 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 74 ರನ್​​ಗಳ ಭರ್ಜರಿ ಇನಿಂಗ್ಸ್ ಆಡಿದರು. ಇನ್ನು ಅಜಿಂಕ್ಯ ರಹಾನೆ 42 ರನ್ ಗಳಿಸಿದರು. ಇದಾಗ್ಯೂ ಕೆಳ ಕ್ರಮಾಂಕದ ಬ್ಯಾಟರ್​​ಗಳು ಬೇಗನೆ ವಿಕೆಟ್ ಒಪ್ಪಿಸಿದ ಪರಿಣಾಮ ಟೀಮ್ ಇಂಡಿಯಾ 244 ರನ್​​ಗಳಿಗೆ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಯಶಸ್ವಿಯಾದರು. ಪರಿಣಾಮ ಕೇವಲ 191 ರನ್​ಗಳಿಗೆ ಆಸೀಸ್ ಪಡೆ ಮುಗ್ಗರಿಸಿತು. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3 ವಿಕೆಟ್ ಕಬಳಿಸಿ ಮಿಂಚಿದರು.

53 ರನ್​​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಪರಿಣಾಮ ಭಾರತ ತಂಡವು ದ್ವಿತೀಯ ಇನಿಂಗ್ಸ್​​ನಲ್ಲಿ ಕೇವಲ 36 ರನ್​​ಗಳಿಗೆ ಆಲೌಟ್ ಆಯಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡದ ಅತ್ಯಂತ ಕಡಿಮೆ ಮೊತ್ತ. ಅಲ್ಲದೆ ಟೆಸ್ಟ್​ನಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ವಿಶ್ವದ 4ನೇ ತಂಡ ಎಂಬ ಅಪಖ್ಯಾತಿಗೂ ಟೀಮ್ ಇಂಡಿಯಾ ಒಳಗಾಗಿತ್ತು.

ಈ ಅಪಖ್ಯಾತಿ ಹೆಗಲೇರಿಸಿಕೊಂಡು 35 ತಿಂಗಳುಗಳು ಕಳೆದಿವೆ. ಇದೀಗ ಮತ್ತದೇ ಅಡಿಲೇಡ್​ನ ಓವಲ್ ಮೈದಾನದಲ್ಲಿ ಮುಖಾಮುಖಿಯಾಗಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿ ನಿಂತಿವೆ. ಈ ಬಾರಿ ಕೂಡ ಉಭಯ ತಂಡಗಳು ಸೆಣಸಲಿರುವುದು ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಎಂಬುದು ವಿಶೇಷ.

ಅಂದರೆ 35 ತಿಂಗಳುಗಳ ಬಳಿಕ 36 ರನ್​ಗಳ ಆಲೌಟ್​​ಗೆ ಸೇಡು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾಗೆ ಬಂದೊದಗಿದೆ. ಅದರಲ್ಲೂ ಈ ಬಾರಿ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿದರೆ, ಅಡಿಲೇಡ್​ನಲ್ಲಿ ನಡೆದ ಡೇ-ನೈಟ್ ಟೆಸ್ಟ್​​ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸಿದ ಮೊದಲ ತಂಡ ಎಂಬ ಖ್ಯಾತಿ ಟೀಮ್ ಇಂಡಿಯಾ ಪಾಲಾಗಿದೆ. ಅದರಂತೆ ಅಪಖ್ಯಾತಿ ಗಳಿಸಿದ ಕ್ರೀಡಾಂಗಣದಲ್ಲೇ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಹೊಸ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

2020 ರಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಪ್ಲೇಯಿಂಗ್ 11:

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೋ ಬರ್ನ್ಸ್ , ಮ್ಯಾಥ್ಯೂ ವೇಡ್ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಕ್ಯಾಮರೋನ್ ಗ್ರೀನ್ , ಟಿಮ್ ಪೈನ್ (ನಾಯಕ) , ಪ್ಯಾಟ್ ಕಮ್ಮಿನ್ಸ್ , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹ್ಯಾಝಲ್​ವುಡ್.

ಇದನ್ನೂ ಓದಿ: 15.5 ಓವರ್​​ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ

ಭಾರತ ಪ್ಲೇಯಿಂಗ್ 11: ಪೃಥ್ವಿ ಶಾ , ಮಯಾಂಕ್ ಅಗರ್ವಾಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ (ನಾಯಕ) , ಅಜಿಂಕ್ಯ ರಹಾನೆ , ಹನುಮ ವಿಹಾರಿ , ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಉಮೇಶ್ ಯಾದವ್ , ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ.

Published On - 12:53 pm, Wed, 4 December 24