15.5 ಓವರ್ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ
West Indies vs Bangladesh: ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸುವ ಮೂಲಕ ವಿಂಡೀಸ್ ವೇಗಿ ಜೇಡನ್ ಸೀಲ್ಸ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 164 ರನ್ಗಳಿಗೆ ಆಲೌಟ್ ಆಗಿದೆ.
Updated on: Dec 02, 2024 | 9:20 AM

ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯದ್ಭುತ ದಾಳಿ ಸಂಘಟಿಸಿದ ಬೌಲರ್ಗಳ ಪಟ್ಟಿಯಲ್ಲಿ ಇನ್ಮುಂದೆ ವೆಸ್ಟ್ ಇಂಡೀಸ್ ವೇಗಿ ಜೇಡನ್ ಸೀಲ್ಸ್ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಅದು ಕೂಡ 10 ಮೇಡನ್ ಜೊತೆ ಕೇವಲ 5 ರನ್ ಮಾತ್ರ ಬಿಟ್ಟುಕೊಟ್ಟ ವೇಗಿಯಾಗಿ ಎಂಬುದು ವಿಶೇಷ.

ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಜೇಡನ್ ಸೀಲ್ಸ್ ನಂಬಲಾಸಾಧ್ಯವಾದಂತಹ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 15.5 ಓವರ್ಗಳನ್ನು ಎಸೆದ ಜೇಡನ್ 10 ಮೇಡನ್ಗಗಳೊಂದಿಗೆ ನೀಡಿದ್ದು ಕೇವಲ 5 ರನ್ ಮಾತ್ರ. ಅಲ್ಲದೆ 4 ವಿಕೆಟ್ಗಳನ್ನು ಸಹ ಕಬಳಿಸಿದರು.

ಇದರೊಂದಿಗೆ ಕಳೆದ 46 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಬೆಸ್ಟ್ ಎಕಾನಮಿ ರೇಟ್್ನಲ್ಲಿ ಬೌಲಿಂಗ್ ಮಾಡಿದ ದಾಖಲೆ ಜೇಡನ್ ಸೀಲ್ಸ್ ಪಾಲಾಯಿತು. ಸೀಲ್ಸ್ ಈ ಇನಿಂಗ್ಸ್ನಲ್ಲಿ 15.5 ಓವರ್ಗಳಲ್ಲಿ ನೀಡಿದ್ದು ಕೇವಲ 5 ರನ್ ಮಾತ್ರ. ಅಂದರೆ ಪ್ರತಿ ಓವರ್ ಸರಾಸರಿ 0.31 ರನ್.

ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ದಾಖಲೆ ಇದ್ದದ್ದು ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ಹೆಸರಿನಲ್ಲಿ. 2015 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ 21 ಓವರ್ಗಳಲ್ಲಿ 9 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಂದು ಟೀಮ್ ಇಂಡಿಯಾ ವೇಗಿ ಪ್ರತಿ ಓವರ್ಗೆ ಕೇವಲ 0.41 ಸರಾಸರಿಯಲ್ಲಿ ರನ್ ನೀಡುವ ಮೂಲಕ ದಾಖಲೆ ಬರೆದಿದ್ದರು.

ಇದೀಗ ಪ್ರತಿ ಓವರ್ಗೆ ಕೇವಲ 0.31 ಸರಾಸರಿಯಲ್ಲಿ ರನ್ ನೀಡುವ ಮೂಲಕ ಜೇಡನ್ ಸೀಲ್ಸ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಕಳೆದ 46 ವರ್ಷಗಳಲ್ಲೇ ಟೆಸ್ಟ್ನಲ್ಲಿ ಅತ್ಯದ್ಭುತ ದಾಳಿ ಸಂಘಟಿಸಿದ ಬೌಲರ್ ಎಂಬ ವಿಶೇಷ ದಾಖಲೆಯನ್ನು ವಿಂಡೀಸ್ ವೇಗಿ ತನ್ನದಾಗಿಸಿಕೊಂಡಿದ್ದಾರೆ.
