1,605 ದಿನಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ!

India vs England: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಈ ಸರಣಿಯ ಮೊದಲ ಮ್ಯಾಚ್​ ಮಳೆಗೆ ಆಹುತಿಯಾದರೆ, ಉಳಿದ ನಾಲ್ಕು ಪಂದ್ಯಗಳಲ್ಲಿ ಭಾರತ ತಂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಈ ಸೋಲುಗಳೊಂದಿಗೆ ಟೀಮ್ ಇಂಡಿಯಾ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.

1,605 ದಿನಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ!
Team India
Image Credit source: x.com

Updated on: Jul 12, 2026 | 7:34 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ  ಸುದೀರ್ಘ ಕಾಲ ಅಧಿಪತ್ಯ ಸ್ಥಾಪಿಸಿದ್ದ ಟೀಮ್ ಇಂಡಿಯಾ ಕೊನೆಗೂ ತನ್ನ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಅದು ಸಹ ಬರೋಬ್ಬರಿ 1,605 ದಿನಗಳ ಬಳಿಕ. ಅಂದರೆ ಭಾರತ ತಂಡವು ಫೆಬ್ರವರಿ 2022 ರಲ್ಲಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು. ಇದಾದ ಬಳಿಕ ಟೀಮ್ ಇಂಡಿಯಾ 4 ವರ್ಷಗಳ ಕಾಲ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

2 ವಿಶ್ವಕಪ್‌ಗಳ ಸುವರ್ಣ ಯುಗ!

ಈ 1,605 ದಿನಗಳ ಅವಧಿಯಲ್ಲಿ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಅಪ್ರತಿಮ ಯಶಸ್ಸು ಕಂಡಿತ್ತು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಭಾರತ ತಂಡ 2024 ಮತ್ತು 2026 ರ ಬ್ಯಾಕ್-ಟು-ಬ್ಯಾಕ್ ಟಿ20 ವಿಶ್ವಕಪ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು.

ಆದರೆ ನಾಯತಕ್ವ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ಮಹಾ ಕುಸಿತ ಶುರುವಾಗಿದೆ. ಅಂದರೆ ಟಿ20 ವಿಶ್ವಕಪ್ 2026 ರಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು. ಇದೀಗ ಅವರ ಬದಲಿಗೆ ನಾಯಕನಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲು:

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹೊಸ ಯುಗ ಆರಂಭಿಸಿರುವ ಟೀಮ್ ಇಂಡಿಯಾ ಈವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ ಎಂಬುದೇ ಸತ್ಯ. ಅಂದರೆ ಆಡಿರುವ 7 ಪಂದ್ಯಗಳಲ್ಲಿ ಒಂದು ಮ್ಯಾಚ್ ಮಳೆಯಿಂದ ರದ್ದಾದರೆ, ಇನ್ನುಳಿದ 6 ಪಂದ್ಯಗಳಲ್ಲಿ ಸೋಲನುಭವಿಸಿದೆ.

  • ಐರ್ಲೆಂಡ್ ವಿರುದ್ಧ ಆಘಾತ: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 0-2 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತು.
  • ಇಂಗ್ಲೆಂಡ್ ವಿರುದ್ಧ ವೈಟ್‌ವಾಶ್: ಹ್ಯಾರಿ ಬ್ರೂಕ್ ನೇತೃತ್ವದ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಭಾರತ 0-4 ಅಂತರದಿಂದ ಸರಣಿ ಸೋತಿತು.

ಅದರಲ್ಲೂ ಟೀಮ್ ಇಂಡಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 56 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವನ್ನು ಹಿಂದಿಕ್ಕಿ ಇಂಗ್ಲೆಂಡ್ ಅಧಿಕೃತವಾಗಿ ನಂ.1 ಪಟ್ಟಕ್ಕೇರಿತು.

ಪ್ರಸ್ತುತ ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿ:

ಶ್ರೇಯಾಂಕ ತಂಡ ರೇಟಿಂಗ್ 
1 England cricket team logoಇಂಗ್ಲೆಂಡ್ 268
2 India national cricket team logoಭಾರತ 267
3 Australia national cricket team logoಆಸ್ಟ್ರೇಲಿಯಾ 260
4 New Zealand national cricket team logoನ್ಯೂಝಿಲೆಂಡ್ 247
5 South Africa national cricket team logoಸೌತ್ ಆಫ್ರಿಕಾ 244
6 Pakistan national cricket team logoಪಾಕಿಸ್ತಾನ್ 240
7 West Indies cricket team logoವೆಸ್ಟ್ ಇಂಡೀಸ್ 234
8 Bangladesh national cricket team logoಬಾಂಗ್ಲಾದೇಶ್ 224
9 Sri Lanka national cricket team logoಶ್ರೀಲಂಕಾ 221
10 Afghanistan national cricket team logoಅಫ್ಘಾನಿಸ್ತಾನ್ 220

ಇದನ್ನೂ ಓದಿ: ಮೇಜರ್ ಸರ್ಜರಿ… ಟೀಮ್ ಇಂಡಿಯಾದಿಂದ ಕೋಚ್​ ಒಬ್ಬರಿಗೆ ಗೇಟ್​ ಪಾಸ್!

ಸದ್ಯ ಇಂಗ್ಲೆಂಡ್ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಮುಂದಿನ ಸರಣಿ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಬಹುದು. ಏಕೆಂದರೆ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ರೇಟಿಂಗ್ ಅಂತರವು ಕೇವಲ 1 ಪಾಯಿಂಟ್ ಮಾತ್ರ ಇದೆ. ಐಸಿಸಿ ಶ್ರೇಯಾಂಕ ವ್ಯವಸ್ಥೆಯು ಅತ್ಯಂತ ಕ್ರಿಯಾತ್ಮಕವಾಗಿದ್ದು, ಪ್ರತಿ ಪಂದ್ಯದ ಗೆಲುವು-ಸೋಲಿನ ನಂತರವೂ ಶ್ರೇಯಾಂಕ ಕೂಡ ಬದಲಾಗುತ್ತದೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದರೆ ಮತ್ತೆ ಅಗ್ರಸ್ಥಾನಕ್ಕೇರಬಹುದು.

Follow Us