
ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಶುಭ್ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೆವೊನ್ ಕಾನ್ವೇ (Devon Conway) ಮತ್ತು ಹೆನ್ರಿ ನಿಕೋಲ್ಸ್ (Henry Nicholls) ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 27 ವರ್ಷಗಳಲ್ಲಿ ಭಾರತದ ವಿರುದ್ಧ ಮಾಡಲಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ, ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟವನ್ನು ಮುರಿಯಲು ಟೀಂ ಇಂಡಿಯಾಕ್ಕೆ 21.4 ಓವರ್‌ಗಳು ಬೇಕಾದವು. ಈ ಸಮಯದಲ್ಲಿ, ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಮೊದಲ ವಿಕೆಟ್‌ಗೆ 117 ರನ್ ಕಲೆಹಾಕಿದರು. ಇದು 27 ವರ್ಷಗಳ ನಂತರ ಭಾರತದಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಕಿವೀಸ್ ದಾಖಲಿಸಿದ ಮೊದಲ ಶತಕದ ಪಾಲುದಾರಿಕೆಯಾಗಿದೆ. ಇದಕ್ಕೂ ಮೊದಲು 1999 ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ನಾಥನ್ ಆಸ್ಟಲ್ ಮತ್ತು ಕ್ರೇಗ್ ಸ್ಪಿಯರ್‌ಮ್ಯಾನ್ 115 ರನ್‌ಗಳ ಜೊತೆಯಾಟವನ್ನಾಡಿ ಈ ದಾಖಲೆ ನಿರ್ಮಿಸಿದ್ದರು. ಅಂದಿನಿಂದ, ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ಆರಂಭಿಕರಿಗೆ ಇಷ್ಟು ದೀರ್ಘ ಪಾಲುದಾರಿಕೆಯನ್ನು ನಿರ್ಮಿಸಲು ಅವಕಾಶ ನೀಡಿರಲಿಲ್ಲ.
ಕಾನ್ವೇ ಮತ್ತು ನಿಕೋಲ್ಸ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ಅದನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಿಕೋಲ್ಸ್ 69 ಎಸೆತಗಳಲ್ಲಿ ಎಂಟು ಬೌಂಡರಿ ಸೇರಿದಂತೆ 62 ರನ್ ಗಳಿಸಿದರೆ, ಡೆವೊನ್ ಕಾನ್ವೇ 67 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಭಾರತದ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಎಲ್ಲರೂ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರಾದರೂ ಇವರಿಬ್ಬರ ಶತಕದ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ಆರಂಭದಲ್ಲೇ ಈ ಜೊತೆಯಾಟ ಮುರಿಯುವ ಅವಕಾಶವಿತ್ತು. ಆದರೆ ಭಾರತ ತಂಡ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ನ್ಯೂಜಿಲೆಂಡ್‌ಗೆ ಲಾಭವಾಯಿತು. ಅಂತಿಮವಾಗಿ ಹರ್ಷಿತ್ ರಾಣಾ, ಹೆನ್ರಿ ನಿಕೋಲ್ಸ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.
ದೇಶಿ ಪಂದ್ಯದಲ್ಲೂ ಗಿರ್ಕಿ ಹೊಡೆದ ಶುಭ್ಮನ್ ಗಿಲ್; ಏಕದಿನ ಸರಣಿ ಕಥೆ ಏನು?
ಭಾರತ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್.
ನ್ಯೂಜಿಲೆಂಡ್: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಕ್ರಿಶ್ಚಿಯನ್ ಕ್ಲಾರ್ಕ್, ಮೈಕೆಲ್ ರೇ, ಕೈಲ್ ಜೇಮಿಸನ್, ಆದಿತ್ಯ ಅಶೋಕ್, ಜ್ಯಾಕ್ ಫಾಕ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sun, 11 January 26