ಪರ್ತ್ ಟೆಸ್ಟ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಅಡಿಲೇಡ್‌ನಲ್ಲಿ ಅವಮಾನಕರ ಸೋಲನ್ನು ಎದುರಿಸಬೇಕಾಯಿತು. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ರೆಡ್ ಬಾಲ್ ಟೆಸ್ಟ್ಗೆ ಸನ್ನದ್ಧವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಾಳೆಯಿಂದ ಆರಂಭವಾಗಲಿದೆ. ಡಬ್ಲ್ಯುಟಿಸಿ ಫೈನಲ್ಗೇರಬೇಕೆಂದರೆ ಟೀಂ ಇಂಡಿಯಾ ಈ ಸರಣಿ ಗೆಲ್ಲುವುದು ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ರಿಸ್ಬೇನ್ ಪಂದ್ಯ ರೋಹಿತ್ ಪಡೆಗೆ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಐದು ದಿನಗಳಲ್ಲೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಪರ್ತ್ ಮತ್ತು ಅಡಿಲೇಡ್ ನಂತರ ಈಗ ಭಾರತ ತಂಡಕ್ಕೆ ಗಾಬಾ ಸವಾಲು ಎದುರಾಗಿದೆ. ಆದರೆ ಹವಾಮಾನ ಇಲಾಖೆಯು ಡಿಸೆಂಬರ್ 14 ರ ಶನಿವಾರದಿಂದ ಪ್ರಾರಂಭವಾಗುವ ಈ ಪಂದ್ಯದ ಎಲ್ಲಾ ಐದು ದಿನಗಳು ಅಂದರೆ ಡಿಸೆಂಬರ್ 18 ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಬ್ರಿಸ್ಬೇನ್ ಟೆಸ್ಟ್‌ನ ಮೊದಲ ದಿನ ಅಂದರೆ ಶನಿವಾರ 80%, ಎರಡನೇ ದಿನ 50%, ಮೂರನೇ, ನಾಲ್ಕನೇ ಮತ್ತು ಐದನೇ ದಿನ 70% ಮಳೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಳೆ ಬೀಳಬಹುದು ಎಂದು ವರದಿಯಾಗಿದೆ.
ಅಲ್ಲದೆ, ಈ ಐದು ದಿನಗಳಲ್ಲಿ ಮಿಂಚು ಮತ್ತು ಚಂಡಮಾರುತದೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ. ಆದಾಗ್ಯೂ, ಇದು ಪಂದ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಡಿಲೇಡ್ ಟೆಸ್ಟ್‌ನಲ್ಲೂ ಇದೇ ರೀತಿಯ ಭವಿಷ್ಯ ಹೇಳಲಾಗಿತ್ತು ಆದರೆ ಮಳೆ ಬರಲಿಲ್ಲ. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿ ಡ್ರಾದಲ್ಲಿ ಅಂತ್ಯಗೊಂಡರೆ ಡಬ್ಲ್ಯುಟಿಸಿ ಫೈನಲ್‌ಗೆ ಭಾರತದ ಹಾದಿ ಭಾಗಶಃ ಮುಚ್ಚಲಿದೆ.
ಟೀಂ ಇಂಡಿಯಾ ಪ್ರಸ್ತುತ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ 57.29 ಶೇಕಡಾ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನೇರವಾಗಿ ಫೈನಲ್ ಪ್ರವೇಶಿಸಬೇಕಾದರೆ ಕನಿಷ್ಠ 3-2 ಅಥವಾ 2-1 ಅಂತರದಿಂದ ಸರಣಿ ಗೆಲ್ಲಲೇಬೇಕು. ಈ ಪಂದ್ಯ ರದ್ದಾದರೆ ಟೀಂ ಇಂಡಿಯಾ 12 ಅಂಕಗಳ ಬದಲಿಗೆ ಕೇವಲ 4 ಅಂಕಗಳನ್ನು ಪಡೆಯಬೇಕಾಗುತ್ತದೆ. ಆ ಬಳಿಕ ಯಾವುದೇ ಬಲೆ ತೆತ್ತಾದರೂ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದು ತಂಡಕ್ಕೆ ಅನಿವಾರ್ಯವಾಗುತ್ತದೆ. ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಇದನ್ನು ಸಾಧಿಸುವುದು ಕಷ್ಟದ ಕೆಲಸ.
ಇದನ್ನು ಬಿಟ್ಟರೆ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ಗೂ ಮುನ್ನ ಯಾವುದೇ ಸರಣಿಯನ್ನು ಹೊಂದಿಲ್ಲ. ಮತ್ತೊಂದೆಡೆ, ಈ ಸರಣಿಯ ಹೊರತಾಗಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ಇನ್ನೊಂದು ಅವಕಾಶ ಸಿಗಲಿದೆ.
ಬ್ರಿಸ್ಬೇನ್ ಟೆಸ್ಟ್ಗೆ ಮಳೆ ಅಡ್ಡಿ ಪಡಿಸದೆ, 2021ರಂತೆಯೇ ಗಾಬಾದಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಗೆದ್ದರೆ, ಅದು ಶೇಕಡಾ 59.80 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರುತ್ತದೆ. ಆಸ್ಟ್ರೇಲಿಯಾ ಶೇ.56.67 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಾರಲಿದೆ. ಆಸ್ಟ್ರೇಲಿಯ ಗೆದ್ದರೆ ಸದ್ಯದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ