ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Womens World Cup 2022) ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಮಹಿಳಾ ತಂಡ (India Women vs Australia Women) ವಿರುದ್ಧ ಸೋಲು ಕಂಡಿದೆ. ಬ್ಯಾಟಿಂಗ್ನಲ್ಲಿ ನಾಯಕಿ ಮಿಥಾಲಿ ರಾಜ್ (Mithali Raj), ಯಸ್ತಿಕಾ ಭಾಟಿಯಾ, ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ತಂಡಕ್ಕೆ ನೆರವಾದರಾದರೂ ಭಾರತೀಯ ಬೌಲರ್ಗಳು ಅಂತಿಮ ಹಂತದಲ್ಲಿ ಮ್ಯಾಜಿಕ್ ಮಾಡದ ಕಾರಣ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿದೆ. ಇತ್ತ ನಾಯಕಿ ಮೆಗ್ ಲ್ಯಾನಿಂಗ್ ಅವರ ಶತಕ ವಂಚಿತ 97 ರನ್ ಹಾಗೂ ವಿಕೆಟ್ ಕೀಪರ್ ಅಲೈಸಾ ಹೀಲಿ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಸೆಮಿ ಫೈನಲ್ಗೆ ಪ್ರವೇಶ ಪಡೆದಿದ್ದು ಆಡಿದ ಐದು ಪಂದ್ಯಗಳಲ್ಲಿ ಐದರಲ್ಲೂ ಗೆದ್ದಿದೆ. 10 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಮಹಿಳಾ ತಂಡ ಮೂರು ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಸೆಮೀಸ್ಗೆ ತಲುಪಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆರಂಭದಲ್ಲಿ ಮೆಗ್ ಲ್ಯಾನಿಂಗ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸ್ಟ್ರೇಲಿಯಾದ ಬೌಲರ್ಗಳು ಯಶಸ್ವಿಯಾದರು. ಭರ್ಜರಿ ಫಾರ್ಮ್ನಲ್ಲಿದ್ದ ಸ್ಮೃತಿ ಮಂದಾನ ಕೇವಲ 11 ಎಸೆತಗಳಲ್ಲಿ 10 ರನ್ಗೆ ಔಟಾದರೆ, ಶಫಾಲಿ 16 ಎಸೆತಗಳಲ್ಲಿ ತಲಾ 1 ಫೋರ್, ಸಿಕ್ಸರ್ನೊಂದಿಗೆ 12 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು. ಕೇವಲ 28 ರನ್ಗಳಿಗೆ ಆರಂಭಿಕ ಇಬ್ಬರು ಬ್ಯಾಟರ್ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಾಟಿಯಾ ಆಸರೆಯಾದರು.
ದೊಡ್ಡ ಹೊಡೆತಕ್ಕೆ ಮಾರು ಹೋಗದೆ ಒಂದು, ಎರಡು ರನ್ ಕಲೆಹಾಕುತ್ತಾ ಮಿಥಾಲಿ-ಯಸ್ತಿಕಾ ತಂಡದ ಮೊತ್ತವನ್ನು 100ರ ಗಡಿದ ದಾಟಿಸಿದರು. ಇಬ್ಬರೂ ತಂಡಕ್ಕೆ ಆಧಾರವಾಗಿ ಅರ್ಧಶತಕ ಪೂರೈಸಿದರು. ಇವರಿಬ್ಬರ ಖಾತೆಯಿಂದ ಒಟ್ಟು 130 ರನ್ಗಳ ಜೊತೆಯಾಟ ಮೂಡಿಬಂತು. ಯಸ್ತಿಕಾ 83 ಎಸೆತಗಳಲ್ಲಿ 6 ಫೋರ್ನೊಂದಿಗೆ 59 ರನ್ ಬಾರಿಸಿ ಔಟಾದರೆ, ಮಿಥಾಲಿ 96 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್ನೊಂದಿಗೆ 68 ರನ್ ಸಿಡಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ರಿಚ್ಚಾ ಘೋಷ್ (8) ಹಾಗೂ ಸ್ನೇಹ್ ರಾಣ (0) ಬೇಗನೆ ಔಟಾದರು. ಆದರೆ, ನಿಂತು ಆಡಿದ ಹರ್ಮನ್ಪ್ರೀತ್ ಕೌರ್ ಕೊನೇ ಹಂತದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಕೇವಲ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 57 ರನ್ ಚಚ್ಚಿದರು. ಇವರ ಜೊತೆ ಸೇರಿದ ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 34 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 3 ವಿಕೆಟ್ ಕಿತ್ತರೆ, ಅಲ್ನಾ ಕಿಂಗ್ 2 ವಿಕೆಟ್ ಪಡೆದರು.
278 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ರಚೆಲ್ ಹೇನ್ಸ್ ಮತ್ತು ಅಲೈಸಾ ಹೀಲಿ ಬರೋಬ್ಬರಿ 121 ರನ್ಗಳ ಜೊತೆಯಾಟ ಆಡಿ ತಂಡದ ಗೆಲುವನ್ನು ಬಹುತೇಕ ಖಚಿತ ಪಡಿಸಿದರು. ರಚೆಲ್ 52 ಎಸೆತಗಳಲ್ಲಿ 43 ರನ್ ಗಳಿಸಿದರೆ ಅಲೈಸಾ 65 ಎಸೆತಗಳಲ್ಲಿ 72 ರನ್ ಚಚ್ಚಿದರು. ಬಳಿಕ ಮೆಗ್ ಲ್ಯಾನಿಂಗ್ ನಾಯಕಿಯ ಆಟವಾಡಿ, ಶತಕದ ಅಂಚಿನಲ್ಲಿ ಎಡವಿದರು. ಇವರು 107 ಎಸೆತಗಳಲ್ಲಿ 13 ಫೋರ್ನೊಂದಿಗೆ 97 ರನ್ ಚಚ್ಚಿ ಔಟಾದರು. ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ ಭರ್ಜರಿ ಗೆಲುವು ಕಂಡಿತು.
India vs Australia Women: ಮಹಿಳಾ ವಿಶ್ವಕಪ್ನಲ್ಲೇ ಅತ್ಯಂತ ದೊಡ್ಡ ಸಿಕ್ಸ್: ದಾಖಲೆ ಬರೆದ ಸ್ಫೋಟಕ ಬ್ಯಾಟರ್ ಪೂಜಾ
IPL 2022 Captains: ಎಂಎಸ್ ಧೋನಿಯಿಂದ ಡುಪ್ಲೆಸಿಸ್ ವರೆಗೆ: ಐಪಿಎಲ್ 2022ರ ನಾಯಕರ ಪಟ್ಟಿ ಇಲ್ಲಿದೆ ನೋಡಿ
Published On - 2:12 pm, Sat, 19 March 22