ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಆಸ್ಟ್ರೇಲಿಯಾವನ್ನು 474 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು 164 ರನ್ ಕಲೆಹಾಕಿದೆ. ಈ ಮೂಲಕ ಭಾರತ ಇನ್ನೂ 310 ರನ್‌ಗಳ ಹಿನ್ನಡೆಯಲ್ಲಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ ಮಾತ್ರ 82 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಮತ್ತದೆ ನಿರಸ ಪ್ರದರ್ಶನ ಕಂಡುಬಂತು. ತಂಡದ ಪರ ರಿಷಬ್ ಪಂತ್ 6 ರನ್ ಹಾಗೂ ರವೀಂದ್ರ ಜಡೇಜಾ 4 ರನ್ ಕಲೆಹಾಕಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಡೀ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಿಂದಲೂ ಬಿಗಿ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲೂ ಅದನ್ನು ಮುಂದುವರೆಸಿತು. ಎರಡನೇ ದಿನದಾಟದ ಮೂರು ಸೆಷನ್ಗಳಲ್ಲಿ ಆಸ್ಟ್ರೇಲಿಯಾವೇ ಪಾರುಪತ್ಯ ಮೆರೆಯಿತು. ದಿನದಾಟದ ಕೊನೆಯ ಸೆಷನ್ನಲ್ಲಿ ಟೀಂ ಇಂಡಿಯಾ ಒಂದು ಹಂತದಲ್ಲಿ 2 ವಿಕೆಟ್ಗೆ 153 ರನ್ ಕಲೆಹಾಕಿತ್ತು. ಇದಾದ ಬಳಿಕ ಟೀಂ ಇಂಡಿಯಾ ಆರು ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
ಯಶಸ್ವಿ ಜೈಸ್ವಾಲ್ ರನ್ ಔಟ್ ಆಗಿದ್ದೇ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಯಶಸ್ವಿ ರನೌಟ್ ಆಗುವುದಕ್ಕೂ ಮುನ್ನ ಕೊಹ್ಲಿ ಜೊತೆ 102 ರನ್ ಜೊತೆಯಾಟ ನಡೆಸಿದರು. ಆದರೆ, ಯಶಸ್ವಿ ರನ್ ಔಟ್ ಆಗುತ್ತಿದ್ದಂತೆಯೇ ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಯಿತು. ಜೈಸ್ವಾಲ್ ಔಟಾದ ಸ್ವಲ್ಪ ಸಮಯಕ್ಕೆ ವಿರಾಟ್ ಕೊಹ್ಲಿ 36 ರನ್ ಗಳಿಸಿ ಔಟಾದರು. ಈ ವೇಳೆ ರಾತ್ರಿ ಕಾವಲುಗಾರನಾಗಿ ಬಂದಿದ್ದ ಆಕಾಶ್ ದೀಪ್ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಮೂರು ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿದರು. ವಾಸ್ತವವಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಆಡುವ ಸಲುವಾಗಿಯೇ ರೋಹಿತ್ ಶರ್ಮಾ ತಂಡದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡಿ ಶುಭ್ಮನ್ ಗಿಲ್ರನ್ನು ತಂಡದಿಂದ ಹೊರಗಿಟ್ಟಿದ್ದರು. ಆದರೆ ತಮ್ಮ ಬ್ಯಾಟಿಂಗ್ ಕ್ರಮಾಂಕ ಬದಲಾದರೂ ರೋಹಿತ್ ಅವರ ಪ್ರದರ್ಶನದಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಇತ್ತ ರೋಹಿತ್ ಆರಂಭಿಕನಾಗಿ ಕಣಕ್ಕಿಳಿದ ಪರಿಣಾಮ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಕೂಡ 24 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ