IND vs ENG: ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ನೆಚ್ಚಿನ ಕ್ರಿಕೆಟಿಗರ ಬಗ್ಗೆ ಸುಂದರ್ ಪಿಚೈ ಮಾತು; ವಿಡಿಯೋ

Sundar Pichai commentary: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಭಾರತ ಸರಣಿಯನ್ನು ಸಮಬಲಗೊಳಿಸಲು ಹೋರಾಡುತ್ತಿದ್ದರೆ, ಇಂಗ್ಲೆಂಡ್ ಗೆಲುವಿನತ್ತ ಸಾಗುತ್ತಿದೆ. ಈ ವೇಳೆ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಪಂದ್ಯ ವೀಕ್ಷಿಸಿ ಕಾಮೆಂಟರಿಯಲ್ಲೂ ಭಾಗವಹಿಸಿದ್ದು ವಿಶೇಷ.

IND vs ENG: ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ನೆಚ್ಚಿನ ಕ್ರಿಕೆಟಿಗರ ಬಗ್ಗೆ ಸುಂದರ್ ಪಿಚೈ ಮಾತು; ವಿಡಿಯೋ
Sundar Pichai

Updated on: Aug 03, 2025 | 7:21 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಸರಣಿಯಲ್ಲಿ 1-2ರಿಂದ ಹಿನ್ನಡೆಯಲ್ಲಿರುವ ಭಾರತ, ಈಗ ಸರಣಿಯನ್ನು ಸಮಬಲಗೊಳಿಸಲು ಹೋರಾಟ ನಡೆಸುತ್ತಿದೆ. ಇತ್ತ ಇಂಗ್ಲೆಂಡ್ ತಂಡ ಕೂಡ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್​ನ ವಿಕೆಟ್ ಉರುಳಿಸಿದರೆ ಮಾತ್ರ ಭಾರತಕ್ಕೆ ಗೆಲುವು ಧಕ್ಕಲಿದೆ. ಇಲ್ಲದಿದ್ದರೆ, ಇಂಗ್ಲೆಂಡ್‌ ತಂಡ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳಲಿದೆ. ಈ ನಡುವೆ ಓವಲ್​ನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಕದನವನ್ನು ವೀಕ್ಷಿಸಲು ಗಣ್ಯರು ಮೈದಾನದಲ್ಲಿ ಹಾಜರಿದ್ದರು. ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ತಂಡಕ್ಕೆ ಬೆಂಬಲ ನೀಡಲು ತಂಡದ ಡಗೌಟ್​ನಲ್ಲಿ ಕಾಣಿಸಿಕೊಂಡಿದ್ದರು. ರೋಹಿತ್ ಮಾತ್ರವಲ್ಲದೆ ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಕೂಡ ಕ್ರೀಡಾಂಗಣಕ್ಕೆ ಬಂದಿದಲ್ಲದೆ, ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ಕಾಮೆಂಟರಿ ಕೂಡ ಮಾಡಿದರು.

ವೀಕ್ಷಕ ವಿವರಣೆ ನೀಡಿದ ಗೂಗಲ್ ಸಿಇಒ

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ ಗೂಗಲ ಸಿಇಒ ಸುಂದರ್ ಪಿಚೈ ಅವರು ಪ್ರಸಿದ್ಧ ನಿರೂಪಕ ಹರ್ಷ ಭೋಗ್ಲೆ ಅವರೊಂದಿಗೆ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಕೆಲ ಸಮಯ ಕಾಮೆಂಟರಿ ನೀಡಿದರು. ಇದೇ ವೇಳೆ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಕ್ರಿಕೆಟ್‌ ಅನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದರು. ತಾನು ಬಾಲ್ಯದಿಂದಲೂ ಕ್ರಿಕೆಟ್‌ನ ಅಭಿಮಾನಿ ಎಂದು ಹೇಳಿಕೊಂಡಿರುವ ಸುಂದರ್, ನಾನು ಮಲಗುವ ಕೋಣೆಯಲ್ಲಿ ಸುನಿಲ್ ಗವಾಸ್ಕರ್ ಮತ್ತು ಸಚಿನ್ ಅವರ ಪೋಸ್ಟರ್‌ಗಳನ್ನು ಅಂಟಿಸಿದ್ದೆ. ಆದರೆ ನಾನು ಎಂದಿಗೂ ಲೈವ್ ಪಂದ್ಯಗಳನ್ನು ವೀಕ್ಷಿಸುತ್ತಿರಲಿಲ್ಲ. ಏಕೆಂದರೆ ನನ್ನ ನೆಚ್ಚಿನ ಕ್ರಿಕೆಟಿಗರು ಔಟ್ ಆಗುವುದನ್ನು ನೋಡಲು ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪಂದ್ಯದ ಸ್ಥಿತಿ ಹೀಗಿದೆ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲ ಇನ್ನಿಂಗ್ಸ್‌ನಲ್ಲಿ 23 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂ, ಇಂಗ್ಲೆಂಡ್ ಗೆಲುವಿಗೆ 374 ರನ್‌ಗಳ ಗುರಿಯನ್ನು ನೀಡಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ ಶತಕ ಮತ್ತು ಆಕಾಶ್ ದೀಪ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅರ್ಧಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇತ್ತ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್‌ ತಂಡ ಕೂಡ ಗೆಲುವಿನತ್ತ ಸಾಗಿದ್ದು, ಪಂದ್ಯ ಯಾರ ಕಡೆಗೆ ವಾಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ