ಟಾಮ್ ಲೇಥಮ್ (Tom Latham) ಅವರ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ನ್ಯೂಜಿಲೆಂಡ್ ತಂಡ ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ (Eden Park in Auckland) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಪಡೆಯನ್ನು ಏಳು ವಿಕೆಟ್‌ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ಈ ಗುರಿಯನ್ನು ಆತಿಥೇಯ ತಂಡ 47.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಾಧಿಸಿತು. ಲೇಥಮ್ ಅಜೇಯ 145 ಮತ್ತು ನಾಯಕ ವಿಲಿಯಮ್ಸನ್ ಅಜೇಯ 94 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಶ್ರೇಯಸ್ ಅಯ್ಯರ್ ಗರಿಷ್ಠ 80 ರನ್ ಗಳಿಸಿದರೆ, ನಾಯಕ ಶಿಖರ್ ಧವನ್ 72 ರನ್‌ಗಳ ಇನಿಂಗ್ಸ್ ಆಡಿದರು. ಅವರ ಆರಂಭಿಕ ಜೊತೆಗಾರ ಶುಭಮನ್ ಗಿಲ್ ಕೂಡ 50 ರನ್‌ಗಳ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದರು.
ಲ್ಯಾಥಮ್ ಮತ್ತು ವಿಲಿಯಮ್ಸನ್ ಜೊತೆಯಾಟ
307 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿಧಾನಗತಿಯ ಆರಂಭವನ್ನು ಪಡೆದು ಆರಂಭದಲ್ಲಿಯೇ ಮೊದಲ ಹೊಡೆತವನ್ನು ಪಡೆಯಿತು. ಎಂಟನೇ ಓವರ್‌ನ ಮೂರನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಆರಂಭಿಕ ಆಟಗಾರ ಫಿನ್ ಅಲೆನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಫಿನ್ ಔಟಾದಾಗ ತಂಡದ ಸ್ಕೋರ್ 35 ರನ್ ಆಗಿತ್ತು. ಟೀಂ ಇಂಡಿಯಾ ಪರ ಮೊದಲ ಏಕದಿನ ಪಂದ್ಯವನ್ನಾಡಿದ ಉಮ್ರಾನ್ ಮಲ್ಲಿಕ್, ಡೆವೊನ್ ಕಾನ್ವೇ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಏಕದಿನ ವಿಕೆಟ್ ಖಾತೆಯನ್ನು ತೆರೆದರು. ಆ ಬಳಿಕ 11 ರನ್ ಗಳಿಸಿದ್ದ ಡ್ಯಾರೆಲ್ ಮಿಚೆಲ್ ಪಡೆಯುವುದರೊಂದಿಗೆ ಉಮ್ರಾನ್ ಎರಡನೇ ವಿಕೆಟ್ ಪಡೆದರು.
ಇಲ್ಲಿಂದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ವಿಲಿಯಮ್ಸನ್ ಮತ್ತು ಲೇಥಮ್ ಅತ್ಯುತ್ತಮ ದ್ವಿಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡರು. ಲಾಥಮ್ ತಮ್ಮ ಅಜೇಯ ಇನ್ನಿಂಗ್ಸ್‌ನಲ್ಲಿ 104 ಎಸೆತಗಳನ್ನು ಎದುರಿಸಿ 19 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. ವಿಲಿಯಮ್ಸನ್ 98 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಹೊರತಾಗಿ ಒಂದು ಸಿಕ್ಸರ್ ಕೂಡ ಬಾರಿಸಿದರು. ಲೇಥಮ್ ಅವರ ಈ ಸ್ಕೋರ್ ಭಾರತದ ವಿರುದ್ಧ ಯಾವುದೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾಡಿದ ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೆ, ವಿಲಿಯಮ್ಸನ್ ಮತ್ತು ಲೇಥಮ್ ನಡುವಿನ 221 ರನ್ ಜೊತೆಯಾಟವು ಇದುವರೆಗೆ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಆಡಿದ ಅತಿದೊಡ್ಡ ಜೊತೆಯಾಟವಾಗಿದೆ.
ಉತ್ತಮ ಆರಂಭ ನೀಡಿದ ಧವನ್- ಗಿಲ್
ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಉತ್ತಮ ಆರಂಭ ಪಡೆದ ಭಾರತ ತಂಡ ಕೊನೆಯಲ್ಲಿ ತತ್ತರಿಸಿತು. ಕೊನೆಯ ಓವರ್‌ಗಳಲ್ಲಿ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿ ತಂಡದ ಸ್ಕೋರ್ ಅನ್ನು 300ರ ಗಡಿ ದಾಟಿಸಿದರು. ಅಯ್ಯರ್ ತಮ್ಮ 76 ಎಸೆತಗಳ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಹೊಡೆದರೆ, ಧವನ್ 77 ಎಸೆತಗಳಲ್ಲಿ 13 ಬೌಂಡರಿಗಳನ್ನು ಬಾರಿಸಿದರು. ಅವರು ಮೊದಲ ವಿಕೆಟ್‌ಗೆ ಗಿಲ್ ಅವರೊಂದಿಗೆ 124 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
Published On - 3:10 pm, Fri, 25 November 22