ಪ್ರಸ್ತುತ ಟೀಂ ಇಂಡಿಯಾ ಟಿ20 ಮತ್ತು ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ( India vs New Zealand) ಪ್ರವಾಸದಲ್ಲಿದೆ. ಟಿ20 ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಭಾರತ ತಂಡ ಶುಕ್ರವಾರದಿಂದ ಆರಂಭವಾಗಿರುವ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ. ಕಾಕತಾಳೀಯವೆಂಬಂತೆ 27 ವರ್ಷಗಳ ಹಿಂದೆ ಉಭಯ ತಂಡಗಳ ನಡುವೆ ನಡೆದ ಏಕದಿನ ಸರಣಿಯ ಸಮಯದಲ್ಲೇ ಈ ಏಕದಿನ ಸರಣಿ ಆರಂಭವಾಗಿದೆ. ವಾಸ್ತವವಾಗಿ 1995 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಲಾಗಿತ್ತು. ಈ ಸರಣಿಯ ಐದನೇ ಪಂದ್ಯ ನವೆಂಬರ್ 26 ರಂದು ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋಲನನುಭವಿಸಿದ ಆಘಾತವೊಂದಾದರೆ, ಈ ಪಂದ್ಯ ವೀಕ್ಷಿಸಲು ಬಂದಿದ್ದ 9 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನಡೆದ ಅವಘಡದಿಂದ ಸಾವನ್ನಪ್ಪಿದ್ದು ಕ್ರಿಕೆಟ್ ಇತಿಹಾಸದ ಕರಾಳ ಪುಟಗಳಲ್ಲಿ ದಾಖಲಾಗಿದೆ.
ಸರಿಯಾಗಿ 27 ವರ್ಷಗಳ ಹಿಂದೆ ಅಂದರೆ 26 ನವೆಂಬರ್ 1995ರ ಭಾನುವಾರಂದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯವು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಉದಯೋನ್ಮುಖ ಬ್ಯಾಟ್ಸ್‌ಮನ್ ನಾಥನ್ ಆಸ್ಟಲ್ ಅವರ ಬಿರುಗಾಳಿ ಇನ್ನಿಂಗ್ಸ್ ನೆರವಿನಿಂದ ಬರೊಬ್ಬರಿ 348 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಟೀಂ ಇಂಡಿಯಾ ಬೆನ್ನಟ್ಟುವುದಕ್ಕೂ ಮೊದಲೇ ಕ್ರೀಡಾಂಗಣದಲ್ಲಿ ಭೀಕರ ಅಪಘಡ ಸಂಭವಿಸಿತ್ತು.
ಗೋಡೆ ಕುಸಿದು 9 ಮಂದಿ ಸಾವು
ಈ ಅವಘಡ ಸಂಭವಿಸಲು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ನ್ನ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿತ್ತು. ವಾಸ್ತವವಾಗಿ 1996 ರ ವಿಶ್ವಕಪ್‌ಗಾಗಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಅನ್ನು ನವೀಕರಿಸುವ ಕೆಲಸ ಆರಂಭವಾಗಿತ್ತು. ಹೀಗಾಗಿ ಕ್ರೀಡಾಂಗಣದ ಪೂರ್ವ ಪೆವಿಲಿಯನ್‌ನಲ್ಲಿ ಹೊಸ ತಡೆಗೋಡೆ ನಿರ್ಮಿಸಲಾಗಿತ್ತು. ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರಿಂದ, ಹೊಸದಾಗಿ ನಿರ್ಮಿಸಲಾಗಿದ್ದ ಈ ತಡೆ ಗೋಡೆ ಕುಸಿದು ಬಿದ್ದಿತ್ತು. ಈ ಆಘಾತಕಾರಿ ಅಪಘಡದಲ್ಲಿ 3 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ ಇತರ 6 ಪ್ರೇಕ್ಷಕರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಹಾಗೆಯೇ ಈ ಘಟನೆಯಲ್ಲಿ 60 ಕ್ಕೂ ಹೆಚ್ಚು ಪ್ರೇಕ್ಷಕರು ಗಾಯಗೊಂಡಿದ್ದರು.
ಇದನ್ನೂ ಓದಿ: ‘ವಿಶ್ವಕಪ್ ಗೆಲ್ಲಬೇಕಾದರೆ ಐಪಿಎಲ್ ಆಡಬೇಡಿ’; ಭಾರತ ತಂಡಕ್ಕೆ ಕೋಚ್ ಎಚ್ಚರಿಕೆ
ಪಂದ್ಯ ರದ್ಧಾಗಲಿಲ್ಲ
ಈ ಅವಘಡದಲ್ಲಿ ಸಾವುನೋವುಗಳಾದರೂ ಆಯೋಜಕರು ಮಾತ್ರ ಪಂದ್ಯವನ್ನು ರದ್ದುಗೊಳಿಸಲಿಲ್ಲ. ಈ ಅವಘಡದ ಬಗ್ಗೆ ಆಟಗಾರರಿಗೂ ಹೇಳದೆ ಭಾರತದ ಇನ್ನಿಂಗ್ಸ್ ಶುರು ಮಾಡಲಾಯಿತು. ಇದಕ್ಕೆ ಪ್ರಮುಖ ಕಾರಣವೂ ಇದ್ದು, ಒಂದು ವೇಳೆ ಪಂದ್ಯ ರದ್ದಾದರೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಗದ್ದಲವನ್ನು ಸೃಷ್ಟಿಸುತ್ತಿದ್ದರು. ಇದರಿಂದಾಗಿ ದೊಡ್ಡ ಮಟ್ಟದ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದ್ದಿದ್ದರಿಂದ ಸಂಘಟಕರು ಪಂದ್ಯವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದರು.
ಆಸ್ಟಲ್ ಶತಕ, ಭಾರತಕ್ಕೆ ಸೋಲು
ಇಷ್ಟೆಲ್ಲದರ ನಡುವೆಯೂ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 99 ರನ್ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ ನಾಥನ್ ಆಸ್ಟಲ್ ಅವರ ಚೊಚ್ಚಲ ಏಕದಿನ ಶತಕದ ಆಧಾರದ ಮೇಲೆ 8 ವಿಕೆಟ್ ಕಳೆದುಕೊಂಡು 348 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 40 ಓವರ್‌ಗಳಲ್ಲಿ ಕೇವಲ 249 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಸಚಿನ್ ತೆಂಡೂಲ್ಕರ್ ಗರಿಷ್ಠ 65 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ