
ವೆಸ್ಟ್ ಇಂಡೀಸ್ ಸರಣಿಯ ನಂತರ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕಾಗಿ ಭಾರತೀಯ ಆಯ್ಕೆದಾರರು ಶೀಘ್ರದಲ್ಲೇ ತಂಡಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದಾಗ್ಯೂ, ಈ ಪ್ರವಾಸಕ್ಕಾಗಿ ನಾಲ್ಕು ತಂಡಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡಲಾಗುವುದರಿಂದ ಆಯ್ಕೆದಾರರಿಗೆ ಇದು ಕಷ್ಟಕರವಾದ ಕೆಲಸವಾಗಿರುತ್ತದೆ. ವಾಸ್ತವವಾಗಿ, ಈ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ20 ಸರಣಿ, ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಆಡಲಿದೆ. ಇದರ ಜೊತೆಗೆ ಭಾರತ ಎ ತಂಡವೂ ಈ ಪ್ರವಾಸದ ಭಾಗವಾಗಿರಲಿದೆ. ಆದ್ದರಿಂದ ಆಯ್ಕೆದಾರರು ನಾಲ್ಕು ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಅಕ್ಟೋಬರ್ 22 ರಂದು ಟಿ20 ಸರಣಿಯೊಂದಿಗೆ ಈ ಪ್ರವಾಸ ಆರಂಭವಾಗಲಿದೆ. ಹೀಗಾಗಿ ಈ ಪ್ರವಾಸಕ್ಕೆ ತಂಡಗಳನ್ನು ಆಯ್ಕೆ ಮಾಡಲು ಆಯ್ಕೆ ಮಂಡಳಿ ಅಕ್ಟೋಬರ್ 5 ರಂದು ಸಭೆ ಸೇರಬೇಕಿತ್ತು. ಆದರೆ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರ ಫಿಟ್‌ನೆಸ್ ವರದಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇದನ್ನು ಮುಂದೂಡಲಾಗಿದೆ. ಇದರ ಜೊತೆಗೆ ಆಯ್ಕೆದಾರರು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಈ ಪ್ರವಾಸದ ವೇಳಾಪಟ್ಟಿ. ನ್ಯೂಜಿಲೆಂಡ್‌ನಲ್ಲಿ ಭಾರತ ಎ ಸರಣಿಯು ಅಕ್ಟೋಬರ್ 24 ರಂದು ಪ್ರಾರಂಭವಾಗಲಿದೆ. ಈ ಸರಣಿಯ ನಡುವೆ ಟಿ20 ಮತ್ತು ಏಕದಿನ ಸರಣಿಗಳು ನಡೆಯಲಿವೆ. ಹೀಗಾಗಿ ಯಾವ ಆಟಗಾರನನ್ನು ಯಾವ ಸರಣಿಗೆ ಆಯ್ಕೆ ಮಾಡಬೇಕು ಎಂಬುದು ಆಯ್ಕೆ ಮಂಡಳಿಯ ಮುಂದಿರುವ ಸವಾಲಾಗಿದೆ.
ವರದಿಗಳ ಪ್ರಕಾರ, ವೆಲ್ಲಿಂಗ್ಟನ್ ಟೆಸ್ಟ್‌ಗೆ ಮುನ್ನ ಬುಮ್ರಾ ಅವರ ಕೆಲಸದ ಹೊರೆ ಕ್ರಮೇಣ ಹೆಚ್ಚಿಸಬೇಕೆಂದು ತಂಡದ ಆಡಳಿತ ಮಂಡಳಿ ಬಯಸಿದೆ. ಆದರೆ ಬುಮ್ರಾ ಅವರನ್ನು ಭಾರತ ಎ ತಂಡದ ಪಂದ್ಯಗಳಲ್ಲಿ ಆಡಿಸುವುದರಿಂದ ಏಕದಿನ ತಂಡ ದುರ್ಬಲಗೊಳ್ಳಬಹುದು. ಆದ್ದರಿಂದ ಬುಮ್ರಾರನ್ನು ಭಾರತ ಎ ತಂಡದಲ್ಲಿ ಆಡಿಸುವ ಸಾಧ್ಯತೆಗಳಿಲ್ಲ.
ಅಕ್ಟೋಬರ್ 6 ರಂದು 2 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ
ಏತನ್ಮಧ್ಯೆ, ಇರಾನಿ ಕಪ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದ ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ಇವರ ಜೊತೆಗೆ ಟೆಸ್ಟ್ ಪಂದ್ಯಗಳಿಗೆ ತಯಾರಿ ನಡೆಸಲು ಆಕಾಶ್ ದೀಪ್ ಕೂಡ ಕೆಲವು ಪಂದ್ಯಗಳನ್ನು ಆಡಲಿದ್ದಾರೆ. ಇದಲ್ಲದೆ, ಭಾರತ ಎ ಸರಣಿ ಮುಗಿದ ನಂತರ ಟೆಸ್ಟ್ ತಂಡದೊಂದಿಗೆ ಕೆಲವು ವೇಗದ ಬೌಲರ್‌ಗಳನ್ನು ನ್ಯೂಜಿಲೆಂಡ್‌ನಲ್ಲಿ ಉಳಿಸಿಕೊಳ್ಳಬಹುದು.