IND vs SA 2nd ODI Preview: ಧೋನಿಯ ತವರು ನೆಲದಲ್ಲಿ ಗೆದ್ದು ಬೀಗುತ್ತಾ ಭಾರತ? ಯುವ ವೇಗಿಗೆ ಅವಕಾಶ?

| Updated By: ಪೃಥ್ವಿಶಂಕರ

Updated on: Oct 08, 2022 | 3:16 PM

IND vs SA 2nd ODI Preview: ರಾಂಚಿ, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ನೆಲವಾಗಿದ್ದು, ಇಲ್ಲಿ ಗೆಲ್ಲುವ ಮೂಲಕ ಕ್ಯಾಪ್ಟನ್ ಕೂಲ್ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡುವ ತವಕದಲ್ಲಿ ಟೀಂ ಇಂಡಿಯಾ ಇದೆ.

IND vs SA 2nd ODI Preview: ಧೋನಿಯ ತವರು ನೆಲದಲ್ಲಿ ಗೆದ್ದು ಬೀಗುತ್ತಾ ಭಾರತ? ಯುವ ವೇಗಿಗೆ ಅವಕಾಶ?
ಟೀಂ ಇಂಡಿಯಾ
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧವನ್ (Shikhar Dhawan) ಪಡೆ ಹಲವು ಪ್ರಯತ್ನಗಳ ನಡುವೆಯೂ ಗೆಲುವಿನ ಹೊಸ್ತಿಲು ದಾಟಲು ಸಾಧ್ಯವಾಗದೆ ಏಳು ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಪ್ರವಾಸಿ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಇದೀಗ ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾಗೆ (Team India) ಸರಣಿಯಲ್ಲಿ ಪುನರಾಗಮನ ಮಾಡುವ ಅವಕಾಶವಿದ್ದು, ಭಾನುವಾರ ಎರಡೂ ತಂಡಗಳು ರಾಂಚಿಯಲ್ಲಿ (Ranchi) ಎರಡನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ರಾಂಚಿ, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ನೆಲವಾಗಿದ್ದು, ಇಲ್ಲಿ ಗೆಲ್ಲುವ ಮೂಲಕ ಕ್ಯಾಪ್ಟನ್ ಕೂಲ್ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡುವ ತವಕದಲ್ಲಿ ಟೀಂ ಇಂಡಿಯಾ ಇದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಕೊಂಚ ಹಿನ್ನಡೆಯುಂಟಾಗಿದ್ದು, ತಂಡದ ವೇಗದ ಬೌಲರ್ ದೀಪಕ್ ಚಹರ್ ಇಂಜುರಿಯಿಂದಾಗಿ 2ನೇ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿದೆ. ಒಂದು ವೇಳೆ ಟೀಂ ಇಂಡಿಯಾ ಈ ಪಂದ್ಯದಲ್ಲಿ ಸೋತರೆ ಸರಣಿ ಕೈ ತಪ್ಪಲಿದೆ. ಹೀಗಾಗಿ ಧೋನಿ ತವರಿನಲ್ಲಿ ಈ ಪಂದ್ಯವನ್ನು ಶತಾಯಗತಾಯ ಗೆಲ್ಲಲು ಧವನ್ ಪಡೆ ಹೋರಾಡಲಿದೆ.

ಮುಖೇಶ್‌ಗೆ ಅವಕಾಶ ಸಿಗುತ್ತಾ?

ಆಸ್ಟ್ರೇಲಿಯಾದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗಾಗಿ ಟೀಂ ಇಂಡಿಯಾದ ಒಂದು ತಂಡ ಹೀಗಾಗಲೇ ಕಾಂಗರೂಗಳ ನಾಡಿಗೆ ಕಾಲಿಟ್ಟಿದೆ. ಹೀಗಾಗಿ ಹರಿಣಗಳ ವಿರುದ್ಧದ ಏಕದಿನ ಸರಣಿಗೆ ಭಾರತ ಬಿ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಅದರಂತೆ ಮೊದಲ ಏಕದಿನ ಪಂದ್ಯದಲ್ಲಿ ರುತುರಾಜ್ ಹಾಗೂ ರವಿ ಬಿಷ್ಣೋಯ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಈಗ 2ನೇ ಪಂದ್ಯಕ್ಕೂ ಮುನ್ನ ವೇಗಿ ದೀಪಕ್ ಚಹರ್ ಇಂಜುರಿಗೊಂಡಿರುವುದರಿಂದ ದೇಶೀ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮತ್ತೊಬ್ಬ ಯುವ ವೇಗಿ ಮುಖೇಶ್​ ಕುಮಾರ್​ಗೆ ಚೊಚ್ಚಲ ಏಕದಿನ ಪಂದ್ಯವನ್ನಾಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಅಲ್ಲದೆ ಕಳೆದ ಪಂದ್ಯ ಹಾಗೂ ಟಿ20 ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ತುಂಬಾ ದುಬಾರಿಯಾಗಿದ್ದರು. ಹೀಗಾಗಿ 2ನೇ ಏಕದಿನ ಪಂದ್ಯದಲ್ಲಿ ಯುವ ವೇಗಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಅಯ್ಯರ್​ಗೆ ಮತ್ತೊಂದು ಅವಕಾಶ

ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಟಿ20 ವಿಶ್ವಕಪ್‌ನ ಮೀಸಲು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಕಾರಣ ಈ ಏಕದಿನ ಸರಣಿಯಲ್ಲಿ ಹೆಚ್ಚು ರನ್ ಗಳಿಸಬೇಕಾಗಿದೆ. ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ವಿಫಲವಾದ ನಂತರ ಮುನ್ನಡೆ ಸಾಧಿಸಿದ ಅಯ್ಯರ್ ಅವರನ್ನು ಸರಣಿಗೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಅಲ್ಲದೆ ಈ ಹಿಂದೆ ಶಾರ್ಟ್ ಪಿಚ್ ಎಸೆತಗಳಿಗೆ ವಿಕೆಟ್ ಒಪ್ಪಿಸುವುದರೊಂದಿಗೆ, ನಿಧಾನಗತಿಯ ಸ್ಟ್ರೈಕ್ ರೇಟ್​ನಿಂದ ಹೋರಾಡುತ್ತಿದ್ದ ಅಯ್ಯರ್ ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಇನ್ನಿಂಗ್ಸ್ ಆಡಿದ್ದರು. ಇವರ ಜೊತೆಗೆ ಸಂಜು ಸ್ಯಾಮ್ಸನ್ ಫಾರ್ಮ್​ನಲ್ಲಿರುವುದು ಮಧ್ಯಮ ಕ್ರಮಾಂಕದ ಚಿಂತೆಯನ್ನು ಕಡಿಮೆ ಮಾಡಿದೆ.

ಧವನ್ ಮಿಂಚಬೇಕಿದೆ

ನಾಯಕ ಶಿಖರ್ ಧವನ್ ಈಗಾಗಲೇ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ತಮ್ಮ ನಾಯಕತ್ವದ ಸಾಮರ್ಥ್ಯದ ಪುರಾವೆಯನ್ನು ನೀಡಿದ್ದಾರೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ನಾಯಕತ್ವದ ಸಮರ್ಥ ನಿರ್ವಹಣೆಯಲ್ಲೂ ಧವನ್ ವಿಫಲರಾಗಿದ್ದರು. ಹೀಗಾಗಿ 2ನೇ ಪಂದ್ಯದಲ್ಲಿ ಧವನ್ ಈ ಎಲ್ಲ ನ್ಯೂನತೆಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಇವರ ಜೊತೆಗೆ ಏಕದಿನ ತಂಡದಲ್ಲಿ ಆರಂಭಿಕರಾಗಿ ಶುಭಮನ್ ಗಿಲ್ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದ್ದು, ತಂಡಕ್ಕೆ ಉತ್ತಮ ಆರಂಭ ನೀಡುವುದರೊಂದಿಗೆ ಬಿಗ್ ಇನ್ನಿಂಗ್ಸ್ ಆಡಬೇಕಿದೆ.

ದಕ್ಷಿಣ ಆಫ್ರಿಕಾಕ್ಕೆ ಅವಕಾಶ

ಮತ್ತೊಂದೆಡೆ, ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ ಸೂಪರ್ ಲೀಗ್ ಪಾಯಿಂಟ್‌ಗಳನ್ನು ಪಣಕ್ಕಿಟ್ಟಿದ್ದು, ಇದು ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶವನ್ನು ನೀಡಲು ಸಹಾಯಕವಾಗಲಿದೆ. ಅಲ್ಲದೆ ತಂಡಕ್ಕೆ ಸರಣಿ ಗೆಲ್ಲುವ ಅವಕಾಶವಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸರಣಿ ಕೈವಶವಾಗಲಿದೆ. ಆದರೆ ಟಿ20 ಜೊತೆಗೆ ಏಕದಿನ ಸರಣಿಯಲ್ಲೂ ಬವುಮಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿರುವುದು ಹರಿಣಗಳಿಗೆ ಕೊಂಚ ಹಿನ್ನಡೆಯನ್ನುಂಟುಮಾಡಿದೆ. ಎರಡು ವಾರಗಳ ನಂತರ ಟಿ20 ವಿಶ್ವಕಪ್ ಆರಂಭವಾಗುತ್ತಿದ್ದು, ತಂಡ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಿದೆ. ಸಮಾದಾನಕರ ಸುದ್ದಿಯೆಂದರೆ ಡೇವಿಡ್ ಮಿಲ್ಲರ್ ಫಾರ್ಮ್​ನಲ್ಲಿರುವುದು. ಗುವಾಹಟಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದ ಮಿಲ್ಲರ್, ಕಳೆದ ಪಂದ್ಯದಲ್ಲಿ ಅಜೇಯ 75 ರನ್ ಗಳಿಸಿದ್ದರು.

ಉಭಯ ತಂಡಗಳು:

ಟೀಂ ಇಂಡಿಯಾ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಜಾನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೇನ್ ಪ್ರಿಟೋರಿಯಸ್, ಕಗಿಸೋ ರಬಾಡ, ತಬ್ರೇಜ್ ಶಮ್ಸಿ.

Published On - 3:16 pm, Sat, 8 October 22