ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬ್ಯಾಟಿಂಗ್, ಹಾಗೂ ಬೌಲರ್‌ಗಳ ಬಲದಿಂದ ಭಾರತವು ನಾಲ್ಕನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 82 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-2ರಲ್ಲಿ ಸಮಬಲ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಿಷಬ್ ಪಂತ್ ನೇತೃತ್ವದ ಟೀಂ ಇಂಡಿಯಾ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 87 ರನ್‌ಗಳಿಗೆ ಕುಸಿಯಿತು. 170 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲರ್‌ಗಳ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಅವೇಶ್ ಖಾನ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾದರು.
ತೆಂಬಾ ಬವುಮಾ ಗಾಯ
ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಟೆಂಬಾ ಬವುಮಾ ತಂಡಕ್ಕೆ ಉತ್ತಮ ಆರಂಭವನ್ನು ನೀಡಲು ಪ್ರಯತ್ನಿಸಿದರು. ಆದರೆ ಬವುಮಾ 20 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಬವುಮಾ ನಿರ್ಗಮನದ ನಂತರ, ದಕ್ಷಿಣ ಆಫ್ರಿಕಾ ತಂಡವು ತತ್ತರಿಸಿತು. ಕ್ವಿಂಟನ್ ಡಿ ಕಾಕ್ ಮತ್ತು ಡ್ವೇನ್ ಪ್ರಿಟೋರಿಯಸ್ ರೂಪದಲ್ಲಿ ತಂಡ 26 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರಾಸಿ ವ್ಯಾನ್ ಡಸ್ಸೆನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಎನ್ರಿಕ್ ನೋಕಿಯಾ ಕೂಡ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ಗೆ ಮರಳಿದರು. ದುಸೇನ್ ಮಾತ್ರ ಗರಿಷ್ಠ 20 ರನ್ ಗಳಿಸಿದರು.
ಕಾರ್ತಿಕ್ ಮತ್ತು ಪಾಂಡ್ಯ ಅಬ್ಬರದ ಇನ್ನಿಂಗ್ಸ್
ಇದಕ್ಕೂ ಮೊದಲು ಭಾರತ ಅತ್ಯಂತ ಕಳಪೆ ಆರಂಭವನ್ನು ಹೊಂದಿತ್ತು. ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ನಾಯಕ ಪಂತ್ ಅವರ ರೂಪದಲ್ಲಿ ಭಾರತ 81 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಪಾಂಡ್ಯ ಮತ್ತು ಕಾರ್ತಿಕ್ ಅದ್ಭುತ ಜೊತೆಯಾಟ ನಡೆಸಿದರು. ಇವರಿಬ್ಬರ ನಡುವೆ 33 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟವಿತ್ತು. ಪಾಂಡ್ಯ ಮತ್ತು ಕಾರ್ತಿಕ್ ಆಧಾರದ ಮೇಲೆ ಭಾರತದ ಸ್ಕೋರ್ 81 ರಿಂದ 146 ಕ್ಕೆ ತಲುಪಿತು. ಪಾಂಡ್ಯ ರೂಪದಲ್ಲಿ ಟೀಂ ಇಂಡಿಯಾಕ್ಕೆ ಐದನೇ ಹೊಡೆತ ಬಿದ್ದಿತು. ಪಾಂಡ್ಯ ತಮ್ಮ ಮೊದಲ T20 ಅರ್ಧಶತಕವನ್ನು ಕೇವಲ 4 ರನ್‌ಗಳಿಂದ ಕಳೆದುಕೊಂಡರು. ಅವರು 31 ರನ್‌ಗಳಿಗೆ 46 ರನ್‌ಗಳ ಇನಿಂಗ್ಸ್ ಆಡಿದರು. ಇದರಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿವೆ. ಕಾರ್ತಿಕ್ ಕೂಡ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ 55 ರನ್ ಗಳಿಸಿ ಔಟಾದರು. ಅವರು 27 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 55 ರನ್ ಗಳಿಸಿದರು.
Published On - 10:32 pm, Fri, 17 June 22