ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡರ್ಬನ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಲಭಿಸಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಪ್ರಮಾದವೊಂದು ನಡೆದುಹೋಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದ ಈ ಅಜಾಗರೂಕ ನಡೆ ಇಡೀ ಭಾರತೀಯರನ್ನು ಕೆರಳಿಸಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ತಪ್ಪನ್ನು ಬೇಕಂತಲೇ ಮಾಡದಿದ್ದರೂ, ಕೋಟ್ಯಾಂತರ ಭಾರತೀಯರು ಆಕ್ರೋಶಗೊಳ್ಳುವಂತೆ ಮಾಡಿದೆ. ಹೀಗಾಗಿ 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ವಿವಾದವೊಂದು ಹುಟ್ಟಿಕೊಂಡಿದ್ದು, ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ತಪ್ಪನ್ನು ಯಾವ ರೀತಿಯಾಗಿ ಸರಿಪಡಿಸಿಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ.. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಎರಡು ತಂಡಗಳು ರಾಷ್ಟ್ರಗೀತೆಯನ್ನಾಡಲು ಮೈದಾನಕ್ಕಿಳಿದಿದ್ದವು. ಈ ವೇಳೆ ಮೊದಲು ಭಾರತದ ರಾಷ್ಟ್ರಗೀತೆ ಮೈದಾನದಲ್ಲಿ ಮೊಳಗಿತು. ಆದರೆ ಎಡವಟ್ಟು ಆದದ್ದು ಇಲ್ಲೇ. ತಾಂತ್ರಿಕ ದೋಷದ ಕಾರಣದಿಂದಾಗಿ ಭಾರತದ ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆ ಬಳಿಕ ಪುನಃ ಮೊದಲಿನಿಂದ ರಾಷ್ಟ್ರಗೀತೆಯನ್ನು ಆರಂಭಿಸಲಾಯಿತು. ಮತ್ತೆ ಅದೇ ಸಮಸ್ಯೆಯಿಂದ ಎರಡನೇ ಬಾರಿಗೆ ರಾಷ್ಟ್ರಗೀತೆಯನ್ನು ನಿಲ್ಲಿಸಲಾಯಿತು. ಈ ವೇಳೆ ರಾಷ್ಟ್ರಗೀತೆಯನ್ನು ಹಾಡುತ್ತಿದ್ದ ಟೀಂ ಇಂಡಿಯಾ ಆಟಗಾರರು ಕೂಡ ಅಚ್ಚರಿಗೊಂಡರು. ಅಂತಿಮವಾಗಿ ಮೂರನೇ ಬಾರಿಗೆ ಭಾರತದ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಿ ಮುಗಿಸಲಾಯಿತು.
Technical issues while playing India national anthem at South Africa #INDvSA pic.twitter.com/zERCrEi3DV
— Mr.Perfect 🗿 (@gotnochills007) November 8, 2024
ವಾಸ್ತವವಾಗಿ ಪ್ರತಿಯೊಂದು ದೇಶಕ್ಕೂ ಅದರದ್ದೇಯಾದ ರಾಷ್ಟ್ರಗೀತೆ ಇರುತ್ತದೆ. ಹಾಗೆಯೇ ಪ್ರತಿ ದೇಶವೂ ತನ್ನ ರಾಷ್ಟ್ರಗೀತೆಗೆ ಮೊದಲ ಆದ್ಯತೆ ನೀಡುತ್ತವೆ. ಅದರಲ್ಲೂ ಭಾರತೀಯರು ರಾಷ್ಟ್ರಗೀತೆಗೆ ನೀಡುವ ಮನ್ನಣೆಯನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲದೆ ರಾಷ್ಟ್ರಗೀತೆಯನ್ನು ಹಾಡಲು ಕೆಲವು ನಿಯಮಗಳನ್ನು ಸಹ ರೂಪಿಸಲಾಗಿದೆ. ಆ ಪ್ರಕಾರ ಒಮ್ಮೆ ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಮಧ್ಯದಲ್ಲಿ ನಿಲ್ಲಿಸುವಂತಿಲ್ಲ.
ಹಾಗೆಯೇ ಎರಡು ಮೂರು ಬಾರಿ ಅರ್ಧಕ್ಕೆ ನಿಲ್ಲಿಸಿ ಮತ್ತೆ ಆರಂಭಿಸುವಂತಿಲ್ಲ. ಹಾಗೆಯೇ ರಾಷ್ಟ್ರಗೀತೆಯನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಸಲಾಗಿದ್ದು, ಕೇವಲ 52 ಸೆಕೆಂಡುಗಳಲ್ಲಿ ರಾಷ್ಟ್ರಗೀತೆ ಪೂರ್ಣಗೊಳ್ಳಬೇಕು. ಆದರೆ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಈ ಗೀತೆಯನ್ನು ಸಂಕ್ಷಿಪ್ತಗೊಳಿಸಿ ಮೊದಲು ಹಾಗೂ ಕೊನೆಯ ಕೆಲವು ಸಾಲುಗಳನ್ನು 20 ಸೆಕೆಂಡುಗಳಲ್ಲಿ ಹಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗ ಕ್ರಿಕೆಟ್ ದಕ್ಷಿಣ ಆಫ್ರಿಕಾ ಭಾರತದ ರಾಷ್ಟ್ರಗೀತೆಯನ್ನು ಎರಡು ಬಾರಿ ಮಧ್ಯಕ್ಕೆ ನಿಲ್ಲಿಸಿ, ಆ ನಂತರ ಪೂರ್ಣಗೊಳಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಾಡಿರುವ ಪ್ರಮಾದ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Fri, 8 November 24