
ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಫೈನಲ್‌ಗೆ ಪ್ರವೇಶಿಸಿದೆ. ಜಪಾನ್‌ನ ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 7 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಸಂಜು ಸ್ಯಾಮ್ಸನ್ ಕೂಡ 7 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ಮತ್ತೊಂದೆಡೆ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಫೋರ್ಗಳೊಂದಿಗೆ 38 ರನ್ಗಳ ಕೊಡುಗೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 13 ಎಸೆತಗಳಲ್ಲಿ 13 ರನ್ಗಳಿಸಲಷ್ಟೇ ಶಕ್ತರಾದರು.
ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಕೂಡ ಅಬ್ಬರ ಮುಂದುವರೆಸಿದ ಇಶಾನ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಇಶಾನ್ ಕಿಶನ್ ಅವರ ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು.
170 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಮೊದಲ ಓವರ್ನಲ್ಲೇ ಬುಮ್ರಾ 2 ವಿಕೆಟ್ ಪಡೆದರೆ, ಆ ಬಳಿಕ ಅಕ್ಷರ್ ಪಟೇಲ್ ಮತ್ತೆರಡು ವಿಕೆಟ್ ಕಬಳಿಸಿದರು. ಇನ್ನು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಶ್ರೀಲಂಕಾ ತಂಡವು 6.2 ಓವರ್ಗಳಲ್ಲಿ ಕೇವಲ 33 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇತ್ತ ಇಡೀ ಪಂದ್ಯದ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಅಂತಿಮವಾಗಿ ಲಂಕಾ ಪಡೆಯನ್ನು 9.5 ಓವರ್ಗಳಲ್ಲಿ ಕೇವಲ 45 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡ 124 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ.
ಶ್ರೀಲಂಕಾ (ಪ್ಲೇಯಿಂಗ್ XI): ಲಸಿತ್ ಕ್ರೂಸ್ಪುಲ್ಲೆ, ಸಿನೆತ್ ಜಯವರ್ದನ, ಸೋಹನ್ ಡಿ ಲಿವೇರಾ (ವಿಕೆಟ್ ಕೀಪರ್), ಅಶೇನ್ ಬಂಡಾರ, ಸಹನ್ ಅರಾಚ್ಚಿಗೆ (ನಾಯಕ), ನುವಾನಿಡು ಫೆರ್ನಾಂಡೊ, ಚಾಮಿಕಾ ಕರುಣಾರತ್ನೆ, ವನುಜಾ ಸಹನ್, ವಿಜಯಕಾಂತ್ ವ್ಯಾಸಕಾಂತ್, ತರಿಂದು ರತ್ನಾಯಕೆ, ಬಿನೂರ ಫೆರ್ನಾಂಡೊ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ… ಬರೋಬ್ಬರಿ 7 ಭರ್ಜರಿ ದಾಖಲೆ ಬರೆದ ಶುಭ್ಮನ್ ಗಿಲ್
ಭಾರತ (ಆಡುವ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ.