
ಕೊಲಂಬೊದಲ್ಲಿ (Colombo Test) ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (India vs Sri Lanka) 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 503 ರನ್ ಕಲೆಹಾಕಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ತಂಡದ ಪರ ದೇವದತ್ ಪಡಿಕ್ಕಲ್ (Devdutt Padikkal) ಹಾಗೂ ಧ್ರುವ್ ಜುರೇಲ್ ( Dhruv Jurel) ಶತಕ ಬಾರಿಸಿದರೆ, ನಾಯಕ ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಲಂಕಾ ಪರ ಅಸಿತಾ ಫೆರ್ನಾಂಡೋ ಅತ್ಯಧಿಕ 4 ವಿಕೆಟ್ ಕಬಳಿಸಿದರೆ, ಕೇಶರ ನುವಂತ 2, ಲಹಿರು ಕುಮಾರ ಹಾಗೂ ಪ್ರಬಾತ್ ಜಯಸೂರ್ಯ ತಲಾ 1 ವಿಕೆಟ್ ಪಡೆದರು.
ಮೊದಲ ದಿನದಂದು 5 ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎರಡನೇ ದಿನದಂದು ಇಲ್ಲಿಂದ ತನ್ನ ಇನ್ನಿಂಗ್ಸ್ ಮುಂದುವರೆಸಿತು. ಆದರೆ ಎರಡನೇ ದಿನದಾಟದ ಮೊದಲ ಸೆಷನ್ನ ಆರಂಭದಲ್ಲೇ ಯುವ ಆಟಗಾರ ಸರಾಂಶ್ ಜೈನ್ 6 ರನ್ಗಳಿಗೆ ಔಟಾದರು. ಹೀಗಾಗಿ ಗಾಯದಿಂದಾಗಿ ಮೊದಲ ದಿನ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದ್ದ ರಿಷಭ್ ಪಂತ್ ಬ್ಯಾಟಿಂಗ್ಗೆ ಬಂದರು. ಪಂತ್ಗೆ ಸಾಥ್ ನೀಡಿದ ಜುರೇಲ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ಅರ್ಧಶತಕ ಬಾರಿಸುವುದರೊಂದಿಗೆ ತಂಡವನ್ನು 400 ರನ್‌ಗಳ ಗಡಿ ದಾಟಿಸಿದರು. ಹೀಗಾಗಿ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 419 ರನ್ ಕಲೆಹಾಕಿತು. ರಿಷಭ್ ಪಂತ್ 63 ರನ್ ಮತ್ತು ಧ್ರುವ್ ಜುರೆಲ್ 59 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಲ್ಲದೆ 112 ರನ್‌ಗಳ ಜೊತೆಯಾಟವನ್ನು ನಿರ್ಮಿಸಿದರು.
ಎರಡನೇ ಸೆಷನ್ ಆರಂಭದಲ್ಲೇ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡಿತು. ರಿಷಭ್ ಪಂತ್ ಮೊದಲ ಎಸೆತದಲ್ಲೇ ಔಟಾದರು. ಮಾನವ್ ಸುತಾರ್ ಕೂಡ 18 ರನ್‌ಗಳ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಒಂದು ತುದಿಯಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದ ಜುರೇಲ್ಗೆ ಸಿರಾಜ್ ಸಾಥ್ ನೀಡಿದರು. ಆದರೆ ಜುರೇಲ್ ಶತಕದ ಸಮೀಪದಲ್ಲಿದ್ದಾಗ ಮಳೆ ಆಟಕ್ಕೆ ಅಡ್ಡಿಪಡಿಸಿತು. ಇದರಿಂದ ಅಂಪೈರ್ಗಳು ಚಹಾ ವಿರಾಮವನ್ನು ಘೋಷಿಸಿದರು. ಮಳೆ ನಿಂತ ಬಳಿಕ ಮೂರನೇ ಸೆಷನ್ ಆರಂಭವಾಯಿತು.
IND vs SL: ಯಶಸ್ವಿ ಜೈಸ್ವಾಲ್ಗೆ ಡಬಲ್ ಶಾಕ್ ನೀಡಿದ ಐಸಿಸಿ; ಲಂಕಾ ವೇಗಿ ವಿರುದ್ಧವೂ ಕ್ರಮ
ಮೂರನೇ ಸೆಷನ್ನಲ್ಲಿ ತಮ್ಮ ಆಟ ಮುಂದುವರೆಸಿದ ಜುರೇಲ್ ಶತಕ ಬಾರಿಸಲು ಕೊಂಚ ಹೆಚ್ಚು ಸಮಯವನ್ನೇ ತೆಗೆದುಕೊಂಡರು. 99 ರನ್ಗಳಿಂದ 100 ರನ್ ಪೂರೈಸಲು ಜುರೇಲ್ ಬರೋಬ್ಬರಿ 13 ಎಸೆತಗಳನ್ನು ತೆಗೆದುಕೊಂಡರು. ಜುರೇಲ್ ಶತಕದ ಬಳಿಕ ಸಿರಾಜ್ ವಿಕೆಟ್ ಪತನವಾಯಿತು. ನಂತರ ಬಂದ ಪ್ರಸಿದ್ಧ್ ಕೃಷ್ಣ ಬೌಂಡರಿ ಬಾರಿಸುವ ಮೂಲಕ ತಂಡವನ್ನು 500 ರನ್‌ಗಳ ಗಡಿ ದಾಟಿಸಿದರು. ಕೂಡಲೇ ನಾಯಕ ಶುಭ್ಮನ್ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
Published On - 5:08 pm, Mon, 24 August 26