
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ಭಾನುವಾರದಿಂದ ಕೊಲಂಬೊದ (Colombo Test) ಸಿಂಹಳೀಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಗೆದ್ದಿರುವ ಟೀಂ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಇತ್ತ ಆತಿಥೇಯ ಶ್ರೀಲಂಕಾ ಸರಣಿ ಸೋಲಿನಿಂದ ಪಾರಾಗಲು ನೋಡುತ್ತಿದೆ. ಆದರೆ ಹವಾಮಾನ ಇಲಾಖೆ ನೀಡಿರುವ ವರದಿ (Weather report) ಉಭಯ ತಂಡಗಳನ್ನು ಆತಂಕಕ್ಕೆ ದೂಡಿದೆ. ಏಕೆಂದರೆ ಮೊದಲ ಟೆಸ್ಟ್ನಂತೆಯೇ ಎರಡನೇ ಟೆಸ್ಟ್ಗೂ ಮಳೆ ಅಡ್ಡಿಪಡಿಸಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಗಾಲೆ ಟೆಸ್ಟ್ನ ಮೊದಲ ದಿನದಂದು ಆಟಕ್ಕೆ ಮಳೆ ಕೊಂಚ ಅಡ್ಡಿ ಪಡಿಸಿತ್ತು. ಆದರೆ ಎರಡನೇ ದಿನದಾಟದಂದು ಮೊದಲ ಸೆಷನ್ ಮಳೆಗಾಹುತಿಯಾಗಿತ್ತು. ಉಳಿದಂತೆ ಟೆಸ್ಟ್ ಪಂದ್ಯ ಯಾವುದೇ ಅಡೆತಡೆಗಳಿಲ್ಲದೆ ಮುಗಿದು ಹೋಗಿತ್ತು. ಇದೀಗ ಎರಡನೇ ಟೆಸ್ಟ್ಗೆ ಉಭಯ ತಂಡಗಳು ಸಜ್ಜಾಗಿರುವ ಹವಾಮಾನ ಇಲಾಖೆ ನೀಡಿರುವ ವರದಿ ಟೆಸ್ಟ್ ಪಂದ್ಯ ನಡೆಯುವುದರ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಹವಾಮಾನ ಇಲಾಖೆಯ ಪ್ರಕಾರ, ಎರಡನೇ ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಟೆಸ್ಟ್ ಪಂದ್ಯದ ಮೊದಲ ದಿನದಂದು ಮಳೆಯಾಗುವ ಸಾಧ್ಯತೆ ಶೇ. 64 ರಷ್ಟಿದೆ. ಅಲ್ಲದೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಎರಡನೇ ದಿನದಂದು ಮಳೆಯಾಗುವ ಸಾಧ್ಯತೆ ಶೇ. 96 ರಷ್ಟಿದೆ. ಹಾಗೆಯೇ ಮೂರನೇ ದಿನದಂದು ಮಳೆಯಾಗುವ ಸಾಧ್ಯತೆ ಶೇ. 91 ರಷ್ಟಿದೆ. ಉಳಿದ ಎರಡು ದಿನವೂ ಮಳೆಯಾಗುವ ಸಾಧ್ಯತೆ ಶೇ. 91 ರಷ್ಟಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ನಡೆಯುವುದು ಸಾಕಷ್ಟು ಅನುಮಾನವಾಗಿದೆ.
IND vs SL: 2ನೇ ಟೆಸ್ಟ್ಗೂ ಮುನ್ನ ಶ್ರೀಲಂಕಾ ತಂಡದಲ್ಲಿ 2 ಬದಲಾವಣೆ
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ 165 ರನ್‌ಗಳಿಂದ ಜಯಗಳಿಸಿತು. ದೇವದತ್ ಪಡಿಕ್ಕಲ್ ಬ್ಯಾಟಿಂಗ್‌ನಲ್ಲಿ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 167 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 82 ರನ್‌ಗಳ ಕೊಡುಗೆ ನೀಡಿದರು. ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಕೂಡ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಇತ್ತ ಬೌಲಿಂಗ್‌ನಲ್ಲಿ ಮಿಂಚಿದ ಮಾನವ್ ಸುತಾರ್ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 372 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 202 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
Published On - 6:24 pm, Sat, 22 August 26