35 ರನ್​​ಗಳಿಗೆ 6 ವಿಕೆಟ್..! ಭಾರತದ ಬೌಲಿಂಗ್​ಗೆ​ ಪಾಕಿಸ್ತಾನ ವಿಲವಿಲ

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಜೀವದಾನಗಳ ನಂತರವೂ ಪಾಕಿಸ್ತಾನದ ಆರಂಭಿಕ ಜೊತೆಯಾಟ ಮುರಿದು ಬೀಳುತ್ತಿದ್ದಂತೆ, ಭಾರತೀಯ ಬೌಲರ್‌ಗಳು ಸತತ ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

35 ರನ್​​ಗಳಿಗೆ 6 ವಿಕೆಟ್..! ಭಾರತದ ಬೌಲಿಂಗ್​ಗೆ​  ಪಾಕಿಸ್ತಾನ ವಿಲವಿಲ
ಭಾರತ Vs ಪಾಕಿಸ್ತಾನ

Updated on: Sep 05, 2026 | 9:12 PM

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್​ನ 9ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ಅಲ್ಲದೆ ನಾವು ಮೊದಲು ಬ್ಯಾಟಿಂಗ್‌ ಮಾಡಿ ಒಂದೊಳ್ಳೆ ಮೊತ್ತವನ್ನು ಕಲೆಹಾಕಿ ಎದುರಾಳಿ ತಂಡಕ್ಕೆ ಒತ್ತಡ ಹೆಚ್ಚಿಸುವ ಕೆಲಸ ಮಾಡಲಿದ್ದೇವೆ ಎಂದು ಟಾಸ್ ಸಮಯದಲ್ಲಿ ಹೇಳಿದರು. ಆದರೆ ಪಾಕಿಸ್ತಾನದ ಬ್ಯಾಟಿಂಗ್‌ ಆರಂಭವಾದ ಕೆಲವೇ ನಿಮಿಷಗಳಲ್ಲಿ ಭಾರತದ ಬೌಲರ್​ಗಳು ಪಾಕ್ ತಂಡದ ಬ್ಯಾಟಿಂಗ್‌ ಬೆನ್ನೇಲುಬು ಮುರಿಯುವಲ್ಲಿ ಯಶಸ್ವಿಯಾದರು.

27 ರನ್​ಗಳ ಜೊತೆಯಾಟ

ಪಾಕಿಸ್ತಾನ ಪರ ವಿಕೆಟ್ ಕೀಪರ್ ಮುನೀಬಾ ಅಲಿ ಹಾಗೂ ಶಾವಾಲ್ ಜುಲ್ಫಿಕರ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರಿಗೂ ಭಾರತದ ಫಿಲ್ಡರ್​ಗಳು ಜೀವದಾನಗಳ ಮೇಲೆ ಜೀವದಾನ ನೀಡಿದರು. ಇದರಲ್ಲಿ ಮುನೀಬಾ ಅಲಿ ಅವರ ಎರಡು ಕ್ಯಾಚ್​ಗಳನ್ನು ಕೈಬಿಡಲಾಯಿತು. ಇತ್ತ ಶಾವಾಲ್ ಜುಲ್ಫಿಕರ್ ರನೌಟ್​ನಿಂದ ಪಾರಾದರು. ಈ ಜೀವದಾನಗಳಿಂದ ಇವರಿಬ್ಬರು ಮೊದಲ ವಿಕೆಟ್​ಗೆ 27 ರನ್​ಗಳ ಜೊತೆಯಾಟ ನೀಡಿದರು. ಆದರೆ ಇವರಿಬ್ಬರ ಜೊತೆಯಾಟ ಮುರಿದು ಬಿದ್ದ ಬಳಿಕ ಪಾಕಿಸ್ತಾನದ ಪೆವಿಲಿಯನ್ ಪರೇಡ್ ಶುರುವಾಯಿತು.

ಪೆವಿಲಿಯನ್ ಪರೇಡ್

ಮುನೀಬಾ ಅಲಿ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಶಫಾಲಿ ವರ್ಮಾ ಭಾರತದ ವಿಕೆಟ್​ಗಳ ಖಾತೆ ತೆರೆದರು. ಈ ವಿಕೆಟ್ 5ನೇ ಓವರ್​ನ 3ನೇ ಎಸೆತದಲ್ಲಿ ಪತನವಾಯಿತು. ನಂತರ 6ನೇ ಓವರ್​ನ ಎರಡನೇ ಎಸೆತದಲ್ಲಿ ಶ್ರೀಚರಣಿ, ಮೂರನೇ ಕ್ರಮಾಂಕದಲ್ಲಿ ಬಂದ ಗುಲ್ ಫಿರೋಜಾ ಅವರನ್ನು ಖಾತೆ ತೆರೆಯುವುದಕ್ಕೂ ಬಿಡದೆ ಔಟ್ ಮಾಡಿದರು. ಅದೇ ಓವರ್​ನ ಕೊನೆಯ ಎಸೆತದಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಾವಾಲ್ ಜುಲ್ಫಿಕರ್ ಅವರನ್ನು ಔಟ್ ಮಾಡಿದರು.

2 ಕ್ಯಾಚ್ ಬಿಟ್ಟ ಪ್ರತೀಕಾ; ಕ್ಲೀನ್ ಬೌಲ್ಡ್ ಮಾಡಿ ಗೇಟ್ ಔಟ್ ಎಂದ ಶಫಾಲಿ..! ವಿಡಿಯೋ

35 ರನ್​ಗಳಿಗೆ 6 ವಿಕೆಟ್ ಪತನ

ನಂತರ 8ನೇ ಓವರ್ ಬೌಲ್ ಮಾಡಲು ಬಂದ ಶ್ರೀಚರಣಿ ಈ ಓವರ್​ನ 2ನೇ ಎಸೆತದಲ್ಲಿ ಆಯೇಶಾ ಜಾಫರ್ ಅವರ ವಿಕೆಟ್ ಉರುಳಿಸಿದರು. 9ನೇ ಓವರ್​ನಲ್ಲಿ ಸದಾಫ್ ಶಮಾಸ್ ಅವರನ್ನು ಪ್ರೇಮಾ ರಾವತ್ ಔಟ್ ಮಾಡಿದರೆ, 10ನೇ ಓವರ್​ನಲ್ಲಿ ಪಾಕ್ ತಂಡದ ನಾಯಕಿ ಫಾತಿಮಾ ಸನಾ ಅವರನ್ನು ದೀಪ್ತಿ ಶರ್ಮಾ ಶೂನ್ಯಕ್ಕೆ ಔಟ್ ಮಾಡಿದರು. ಹೀಗಾಗಿ 27 ರನ್​​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 8 ರನ್ ಕಲೆಹಾಕುವಷ್ಟರಲ್ಲಿ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Sat, 5 September 26

Loading...
Unable to load recommendations.
Follow Us