
ಭಾರತದ ಮಹಿಳಾ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 121 ರನ್ಗಳ ಭರ್ಜರಿ ಜಯ ಸಾಧಿಸಿದೆ. ವೈಷ್ಣವಿ ಶರ್ಮಾ ಮತ್ತು ದೀಪ್ತಿ ಶರ್ಮಾ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಜೊತೆಗೆ ಹರ್ಮನ್ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಅವರ ಶತಕದ ನೆರವಿನಿಂದ ಭಾರತ ಈ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿ, ಜಿಂಬಾಬ್ವೆ ತಂಡಕ್ಕೆ 329 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ 48.5 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 8 ಎಸೆತಗಳಲ್ಲಿ 8 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಸತತ ಎರಡನೇ ಪಂದ್ಯದಲ್ಲೂ ಮಿಂಚಿದ ಪ್ರತಿಕಾ ರಾವಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 61 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಇತ್ತ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 15 ಬೌಂಡರಿಗಳ ನೆರವಿನಿಂದ 126 ರನ್ ಗಳಿಸಿದರು.
ಅಲ್ಲದೆ ಮೂರನೇ ವಿಕೆಟ್ಗೆ ಪ್ರತಿಕಾ ರಾವಲ್ ಮತ್ತು ಹರ್ಮನ್ಪ್ರೀತ್ ಕೌರ್ 118 ಎಸೆತಗಳಲ್ಲಿ 124 ರನ್ಗಳ ಜೊತೆಯಾಟವಾಡಿದರು. ಇದಾದ ಬಳಿಕ ಐದನೇ ವಿಕೆಟ್ಗೆ ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಜೋಡಿ ಜಿಂಬಾಬ್ವೆ ಬೌಲರ್ಗಳನ್ನು ಕಾಡಿತು. ಈ ಇಬ್ಬರು 137 ಎಸೆತಗಳಲ್ಲಿ 153 ರನ್ಗಳನ್ನು ಸೇರಿಸಿ ಭಾರತ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಬೌಲಿಂಗ್ನಲ್ಲಿ ಮಿಂಚಿದ ದೀಪ್ತಿ ಶರ್ಮಾ ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದರು. ಕೇವಲ 83 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ತಮ್ಮ ಏಕದಿನ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದರು. ದೀಪ್ತಿ 86 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ಅಜೇಯ 106 ರನ್ ಗಳಿಸಿದರು. ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಅವರ ಶತಕದ ಇನ್ನಿಂಗ್ಸ್ಗಳು ಭಾರತದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣವಾದವು. ಜಿಂಬಾಬ್ವೆ ಪರ ನೋಮ್ವೆಲೊ ಸಿಬಾಂಡಾ ಗರಿಷ್ಠ 2 ವಿಕೆಟ್ ಪಡೆದರು. ಆದರೆ ಭಾರತದ ಬ್ಯಾಟರ್ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಎದುರಾಳಿ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ.
9 ವರ್ಷಗಳ ಕಾಯುವಿಕೆಗೆ ತೆರೆ; 83 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ದೀಪ್ತಿ ಶರ್ಮಾ
ಗುರಿ ಬೆನ್ನಟ್ಟಿದ ಜಿಂಬಾಬ್ವೆ ಪರ ಚಿಪೋ ಮುಗೆರಿ-ತಿರಿಪಾನೊ 46 ರನ್ ಗಳಿಸಿದರೆ, ಆರಂಭಿಕ ಆಟಗಾರ್ತಿ ಮೊಡೆಸ್ಟರ್ ಮುಪಾಚಿಕ್ವಾ 49 ರನ್ಗಳ ಕೊಡುಗೆ ನೀಡಿದರು. ಬಿಲವ್ಡ್ ಬಿಜಾ 34 ರನ್ ಗಳಿಸಿದರು. ನಾಯಕಿ ಜೋಸೆಫಿನ್ ನ್ಕೊಮೊ 20 ರನ್ ಗಳಿಸಿ ಔಟಾದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಭಾರತದ ಪರ ವೈಷ್ಣವಿ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 10 ಓವರ್ಗಳಲ್ಲಿ 39 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮತ್ತೊಂದೆಡೆ ದೀಪ್ತಿ ಶರ್ಮಾ 9 ಓವರ್ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಜೊತೆಗೆ ಸಯಾಲಿ ಸತ್ಘರೆ, ಶ್ರೀ ಚರಣಿ ಮತ್ತು ಜಿಂತಿಮಣಿ ಕಲಿತಾ ತಲಾ ಒಂದು ವಿಕೆಟ್ ಪಡೆದರು.