
ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ದುಬೈನಲ್ಲಿ ನಡೆದ ಮಹಿಳಾ ಟಿ20 ಏಷ್ಯಾಕಪ್‌ನ 9ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡ ಭಾರತದ ಸ್ಪಿನ್ ಮ್ಯಾಜಿಕ್ಗೆ ತತ್ತರಿಸಿ ಕೇವಲ 55 ರನ್‌ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕೇವಲ ಇಬ್ಬರು ಆಟಗಾರ್ತಿಯರು ಅಂದರೆ ಮುನೀಬಾ ಅಲಿ ಹಾಗೂ ಶಾವಾಲ್ ಜುಲ್ಫಿಕರ್ ಮಾತ್ರ ಎರಡಂಕಿ ದಾಟಿದ್ದನ್ನು ಬಿಟ್ಟರೆ ಉಳಿದವರಿಗೆ 10 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ಮೂವರು ಆಟಗಾರ್ತಿಯರು ಖಾತೆಯನ್ನು ತೆರೆಯದೆ ಔಟಾದರು. ಇದರಲ್ಲಿ ನಾಯಕಿ ಫಾತಿಮಾ ಸನಾ ಅವರ ವಿಕೆಟ್ ಕೂಡ ಸೇರಿತ್ತು. ಇತ್ತ ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಶ್ರೀಚರಣಿ ಹಾಗೂ ಪ್ರೇಮಾ ರಾವತ್ ತಲಾ 3 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್ ಉರುಳಿಸಿದರು.
ಭಾರತದ ವಿರುದ್ಧ ಕೇವಲ 55 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆ ಬರೆಯಿತು. ಇದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧ 56 ರನ್‌ಗಳಿಗೆ ಆಲೌಟ್ ಆಗಿದ್ದು, ಪಾಕಿಸ್ತಾನದ ಇದುವರೆಗಿನ ಕಡಿಮೆ ಮೊತ್ತವಾಗಿತ್ತು. ಇತ್ತ ಪಾಕ್ ತಂಡವನ್ನು 60 ರನ್ಗಳ ಗಡಿ ದಾಟಲು ಬಿಡದೆ ಟೀಂ ಇಂಡಿಯಾ, ಈ ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎದುರಾಳಿ ತಂಡವನ್ನು 70 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದ ದಾಖಲೆ ಬರೆಯಿತು.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2026 ರ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು. ಆರಂಭಿಕರಾದ ಮುನೀಬಾ ಅಲಿ ಮತ್ತು ಶಾವಲ್ ಜುಲ್ಫಿಕರ್ 4.2 ಓವರ್‌ಗಳಲ್ಲಿ 27 ರನ್‌ಗಳನ್ನು ಸೇರಿಸುವ ಮೂಲಕ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಈ ಅವಧಿಯಲ್ಲಿ ಪ್ರತಿಕಾ ರಾವಲ್ ಎರಡೂ ಬಾರಿ ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣದಿಂದ ಮುನೀಬಾಗೆ ಎರಡು ಜೀವದಾನಗಳು ದಕ್ಕಿದವು. ಆದಾಗ್ಯೂ, ಮುನೀಬಾ ಅಥವಾ ಪಾಕಿಸ್ತಾನ ತಂಡ ಈ ಆರಂಭವನ್ನು ಬಳಸಿಕೊಳ್ಳಲು ಮತ್ತು ಬಲವಾದ ಮೊತ್ತವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ.
ಐದನೇ ಓವರ್‌ನಲ್ಲಿ ಪಾಕ್ ತಂಡದ ಸ್ಕೋರ್ 27 ರನ್‌ಗಳಿದ್ದಾಗ ಶೆಫಾಲಿ ವರ್ಮಾ, ಮುನೀಬಾ ಅವರ ವಿಕೆಟ್ ಉರುಳಿಸಿ ತಂಡಕ್ಕೆ ಮೊದಲ ವಿಕೆಟ್ ತಂದುಕೊಟ್ಟರು. ನಂತರ ದಾಳಿಗಿಳಿದ ಯುವ ಸ್ಪಿನ್ನರ್ ಶ್ರೀ ಚರಣಿ ಕೇವಲ ಐದು ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು. ಚರಣಿ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ ಏಳು ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ನಂತರ ಪ್ರೇಮಾ ರಾವತ್ ಮತ್ತು ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಉಳಿದ ವಿಕೆಟ್‌ಗಳನ್ನು ಪಡೆದು ಪಾಕ್ ತಂಡವನ್ನು ಬೇಗನೇ ಆಲೌಟ್ ಮಾಡಿದರು. ಶ್ರೀಚರಣಿಯಂತೆಯೇ ಪ್ರೇಮಾ ರಾವತ್ ನಾಲ್ಕು ಓವರ್‌ಗಳಲ್ಲಿ ಕೇವಲ ಒಂಬತ್ತು ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದರು.
2 ಕ್ಯಾಚ್ ಬಿಟ್ಟ ಪ್ರತೀಕಾ; ಕ್ಲೀನ್ ಬೌಲ್ಡ್ ಮಾಡಿ ಗೇಟ್ ಔಟ್ ಎಂದ ಶಫಾಲಿ..! ವಿಡಿಯೋ
ಮೇಲೆ ಹೇಳಿದಂತೆ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಲೆಹಾಕಿದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಇದಕ್ಕೂ ಮೊದಲು, ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 56 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಸೇರಿದಂತೆ ಪಾಕಿಸ್ತಾನ ಮಹಿಳಾ ತಂಡವು ಒಟ್ಟು 47 ಬಾರಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಕ್ಕಿಂತ ಕಡಿಮೆ ರನ್ ಕಲೆಹಾಕಿದ ಬೇಡದ ದಾಖಲೆ ಬರೆದಿದೆ.
Published On - 9:23 pm, Sat, 5 September 26