
2026 ರ ಮಹಿಳಾ ಟಿ20 ವಿಶ್ವಕಪ್ನ (Women’s T20 World Cup 2026) 29ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪದ್ಯ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರ್ಣಾಯಕವಾಗಿತ್ತು. ಅದರಂತೆ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ. ಹಾಗೆಯೇ ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೂ ಏರಿದೆ. ದಕ್ಷಿಣ ಆಪ್ರಿಕಾದ ಗೆಲುವಿನಿಂದಾಗಿ ಭಾರತ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ ಮೊದಲ ಎಸೆತದಲ್ಲೇ ವಿಕೆಟ್ ಪತನವಾಯಿತು. ಎರಡನೇ ವಿಕೆಟ್ ಕೂಡ ಕೇವಲ 14 ರನ್ಗಳಿಗೆ ಉರುಳಿತು. ಇದಾದ ಬಳಿಕ ಜೊತೆಯಾದ ಸೋಭ್ನಾ ಮೊಸ್ತಾರಿ (42 ರನ್) ಮತ್ತು ನಿಗರ್ ಸುಲ್ತಾನ 32 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 50 ರನ್ಗಳ ಗಡಿ ದಾಟಿಸಿದರು. ಕೊನೆಯಲ್ಲಿ ಶರ್ಮಿನ್ ಅಖ್ತರ್ 22 ರನ್ಗಳ ಕಾಣಿಕೆ ನೀಡಿದರು. ಈ ಮೂವರ ಆಟದಿಂದಾಗಿ ಬಾಂಗ್ಲಾದೇಶ 117 ರನ್ ಕಲೆಹಾಕಿತು. ಇತ್ತ ದಕ್ಷಿಣ ಆಫ್ರಿಕಾ ಪರ ನಾನ್ಕುಲುಲೆಕೊ ಮ್ಲಾಬಾ ಎರಡು ವಿಕೆಟ್ ಪಡೆದರೆ, ಮರಿಜಾನ್ನೆ ಕಾಪ್, ಶಬ್ನಿಮ್ ಇಸ್ಮಾಯಿಲ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.
ವಿಶ್ವಕಪ್ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೂ ಕಳಪೆ ಆರಂಭ ಸಿಕ್ಕಿತು. ಬಾಂಗ್ಲಾದೇಶದ ಇನ್ನಿಂಗ್ಸ್ನಂತೆಯೇ ದಕ್ಷಿಣ ಆಫ್ರಿಕಾ ಕೂಡ ಮೊದಲ ಓವರ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ಗೆ ಜೊತೆಯಾದ ಟಾಜ್ಮಿನ್ ಬ್ರಿಟ್ಸ್ ಹಾಗೂ ಅನ್ನೆರಿ ಡೆರ್ಕ್ಸೆನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಬ್ರಿಟ್ಸ್ 20 ರನ್ ಬಾರಿಸಿ ಔಟಾದರೆ, ಡೆರ್ಕ್ಸೆನ್ 45 ರನ್ಗಳ ಕಾಣಿಕೆ ನೀಡಿದರು. ಮರಿಜಾನ್ನೆ ಕಪ್ ಹಾಗೂ ಡಿ ಕ್ಲರ್ಕ್ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್ನ 2ನೇ ಎಸೆತದಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
Published On - 6:39 pm, Sun, 28 June 26