AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್​

Women's T20 World Cup 2026: 2026ರ ಮಹಿಳಾ T20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ನಿರಾಶಾದಾಯಕ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಈ ಆಘಾತದ ನಡುವೆ, ತಂಡದ ಮೂವರು ದಿಗ್ಗಜ ಆಟಗಾರ್ತಿಯರಾದ ಸೋಫಿ ಡಿವೈನ್, ಸುಜಿ ಬೇಟ್ಸ್ ಮತ್ತು ಲಿಯಾ ತಹುಹು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯ ಸೋತಿದ್ದರಿಂದ, ಈ ಶ್ರೇಷ್ಠ ಆಟಗಾರ್ತಿಯರಿಗೆ ಗೆಲುವಿನ ವಿದಾಯ ಸಾಧ್ಯವಾಗಲಿಲ್ಲ.

ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್​
Newzealand Cricketers
ಪೃಥ್ವಿಶಂಕರ
|

Updated on:Jun 28, 2026 | 5:10 PM

Share

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ತನ್ನ ವಿಶ್ವಕಪ್‌ ಪಯಣವನ್ನು ಮುಗಿಸಿತು. ಕಳೆದ ಆವೃತ್ತಿಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಆಲಂಕರಿಸಿದ್ದ ನ್ಯೂಜಿಲೆಂಡ್, ಈ ಆವೃತ್ತಿಯಲ್ಲಿ ಸೆಮಿಫೈನಲ್​ಗೂ ಅರ್ಹತೆ ಪಡೆಯಲಿಲ್ಲ. ಹಾಲಿ ಚಾಂಪಿಯನ್​ಗಳಿಗೆ ಈ ಆಘಾತದ ನಡುವೆ ಮತ್ತೊಂದು ಆಘಾತ ಎದುರಾಗಿದೆ. ತಂಡ ವಿಶ್ವಕಪ್‌ನಿಂದ ಹೊರಬೀಳುವುದರ ಜೊತೆಗೆ ತಂಡದ ಮೂವರು ಲೆಜೆಂಡರಿ ಅಟಗಾರ್ತಿಯರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದರು.

ಒಂದೇ ದಿನ ಮೂವರು ನಿವೃತ್ತಿ

ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿನ ನಂತರ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬಿತ್ತು. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಈ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದು ಸೆಮಿಫೈನಲ್​ಗೆ ಅರ್ಹತೆ ಪಡೆದಿವೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೋಲಿನಿಂದ ನ್ಯೂಜಿಲೆಂಡ್‌ನ ಮೂವರು ಶ್ರೇಷ್ಠ ಆಟಗಾರ್ತಿಯರ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆಗೊಂಡಿದೆ. ಸೋಫಿ ಡಿವೈನ್, ಸುಜಿ ಬೇಟ್ಸ್ ಮತ್ತು ಲಿಯಾ ತಹುಹು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ನ್ಯೂಜಿಲೆಂಡ್, ಈ ಮೂವರು ಶ್ರೇಷ್ಠ ಆಟಗಾರ್ತಿಯರಿಗೆ ಗೆಲುವಿನೊಂದಿಗೆ ವಿದಾಯ ಹೇಳಲು ಬಯಸಿತ್ತು, ಆದರೆ ಅದು ಸಾಧ್ಯವಾಗಲಿಲ್ಲ.

ಪಂದ್ಯದ ನಂತರ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಆಟಗಾರ್ತಿಯರು ಮೂವರು ನಿವೃತ್ತ ಆಟಗಾರ್ತಿಯರಿಗೆ ಗೌರವ ಸಲ್ಲಿಸಿದರು. ಸೋಫಿ ಡಿವೈನ್, ಸುಜಿ ಬೇಟ್ಸ್ ಮತ್ತು ಲಿಯಾ ತಹುಹು ಅವರ ಕಣ್ಣಲ್ಲಿ ನೀರು ತುಂಬಿತ್ತು. ಮೂವರು ಅನುಭವಿಗಳು ಭಾವುಕರಾಗಿದ್ದರು.

ಪಂದ್ಯ ಹೀಗಿತ್ತು

ಇನ್ನು ಈ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್ ಗಳಿಸಿತು. ತಂಡದ ಪರ ನಾಯಕಿ ಅಮೆಲಿಯಾ ಕೆರ್ 42 ರನ್​ಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ 36 ವರ್ಷದ ಡಿವೈನ್ ಕೇವಲ 14 ಎಸೆತಗಳಲ್ಲಿ 30 ರನ್ ಗಳಿಸಿದರು, ಇದರಲ್ಲಿ ಮೂರು ಅಮೋಘ ಸಿಕ್ಸರ್‌ಗಳು ಸೇರಿದ್ದವು. ಇವರಿಬ್ಬರ ಹೊರಯಾಗಿ, 38 ವರ್ಷದ ಸುಜೀ ಬೇಟ್ಸ್ ಕೂಡ 13 ಎಸೆತಗಳಲ್ಲಿ 19 ರನ್ ಬಾರಿಸಿದರು.

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೂ ಉತ್ತಮ ಆರಂಭ ಸಿಗಲಿಲ್ಲ. ಆದರೆ ಆರಂಭಿಕ ಹಿನ್ನಡೆಯ ನಂತರ, ಡ್ಯಾನಿ ವ್ಯಾಟ್-ಹಾಡ್ಜ್ ಮತ್ತು ಸೋಫಿಯಾ ಡಂಕ್ಲಿ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ಎರಡನೇ ವಿಕೆಟ್‌ಗೆ ಅಜೇಯ 128 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು. ವ್ಯಾಟ್ 53 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 89 ರನ್ ಗಳಿಸಿದರೆ, ಡಂಕ್ಲಿ 38 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸೇರಿದಂತೆ ಅಜೇಯ 49 ರನ್ ಬಾರಿಸಿದರು. ಇವರಿಬ್ಬರ ಆಟದಿಂದಾಗಿ ಇಂಗ್ಲೆಂಡ್ ಕೇವಲ 17.4 ಓವರ್‌ಗಳಲ್ಲಿ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 28 June 26

Follow Us