ವೈಭವ್, ಅಭಿಷೇಕ್ ಫೇಲ್ ಆದ್ರೂ ತಲೆಕೆಡಿಸಿಕೊಳ್ಳದ ತಿಲಕ್; ಭರ್ಜರಿ ಸೆಂಚುರಿ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ರಲ್ಲಿ ನೇಪಾಳ ವಿರುದ್ಧ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕುಮಾರ್ ಕುಶಾಗ್ರ ಜೊತೆ 206 ರನ್ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆರಂಭಿಕ ಆಘಾತದ ನಂತರ ಈ ಜೋಡಿ ಎಚ್ಚರಿಕೆಯ ಆಟ ಪ್ರದರ್ಶಿಸಿ ಬೃಹತ್ ಮೊತ್ತಕ್ಕೆ ಕಾರಣವಾಯಿತು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರ ಮೊದಲ ಲೀಗ್ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ನೇಪಾಳ ವಿರುದ್ಧ ನಾಯಕನ ಆಟ ಪ್ರದರ್ಶಿಸಿದ್ದಾರೆ. ಈಗಾಗಲೇ ಕುಮಾರ್ ಕುಶಾಗ್ರ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರೆ, ಇದೀಗ ತಿಲಕ್ ವರ್ಮಾ ಕೂಡ ಶತಕ ಬಾರಿಸುವ ಮೂಲಕ ಭಾರತ ತಂಡದ ಪರ ಎರಡನೇ ಶತಕ ದಾಖಲಿಸಿದ್ದಾರೆ. ಬೌಂಡರಿ ಬಾರಿಸುವ ಮೂಲಕ ತಿಲಕ್ ತಮ್ಮ ಶತಕದ ಸಂಭ್ರಮ ಆಚರಿಸಿದರು. ಇವರಿಬ್ಬರ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್ಗಳನ್ನು ಕಳೆದುಕೊಂಡು 332 ರನ್ ಕಲೆಹಾಕಿದೆ.
107 ಎಸೆತಗಳಲ್ಲಿ ಶತಕ ಸಿಡಿಸಿದ ತಿಲಕ್
ನೇಪಾಳ ವಿರುದ್ಧ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ, ಕ್ರೀಸ್ನಲ್ಲಿ ನೆಲೆಯೂರಿದ ಬಳಿಕ ತಮ್ಮ ನೈಜ ಆಟಕ್ಕೆ ಮರಳಿದರು. ತಾಳ್ಮೆಯ ಆಟದ ಮೂಲಕ ರನ್ ಗಳಿಸುತ್ತಾ ಸಾಗಿದ ಅವರು, 107 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ ತಿಲಕ್ 4 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿ ಮಿಂಚಿದರು. ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಮೇಲೆತ್ತುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇನ್ನು ಕುಮಾರ್ ಕುಶಾಗ್ರ ಜೊತೆಗೂಡಿ ನಾಲ್ಕನೇ ವಿಕೆಟ್ಗೆ ಬರೋಬ್ಬರಿ 206 ರನ್ಗಳ ಅಮೋಘ ಜೊತೆಯಾಟವಾಡಿದರು. ಈ ಮೂಲಕ ತಂಡದ ಮೊತ್ತವನ್ನು ಬಲಿಷ್ಠ ಸ್ಥಿತಿಗೆ ತಲುಪಿಸಿದರು.
ಭಾರತಕ್ಕೆ ಆಸರೆಯಾದ ಜೋಡಿ
ನೇಪಾಳ ಬೌಲರ್ಗಳು ಆರಂಭದಲ್ಲೇ ಭಾರತದ ಪ್ರಮುಖ ಮೂರು ವಿಕೆಟ್ಗಳನ್ನು ಕೇವಲ 42 ರನ್ಗಳಿಗೆ ಉರುಳಿಸಿದ್ದರು. ಪಿಚ್ ಕೂಡ ವೇಗದ ಬೌಲರ್ಗಳಿಗೆ ಉತ್ತಮ ನೆರವು ನೀಡುತ್ತಿತ್ತು. ಹೀಗಾಗಿ ಭಾರತ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಸಂದರ್ಭದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ ಯಾವುದೇ ಆತುರ ಮಾಡದೆ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರು. ಸಮಯ ಕಳೆದಂತೆ ರನ್ ಗಳಿಕೆಯ ವೇಗ ಹೆಚ್ಚಿಸಿದ ಈ ಜೋಡಿ ನೇಪಾಳ ಬೌಲರ್ಗಳ ಮೇಲೆ ಸವಾರಿ ಮಾಡಿತು.
ಕುಮಾರ್ ಕುಶಾಗ್ರ ಕೂಡ ನಾಯಕನಿಗೆ ಅತ್ಯುತ್ತಮ ಸಾಥ್ ನೀಡಿದರು. ಅವರು 102 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 117 ರನ್ ಸಿಡಿಸಿ ಗಮನ ಸೆಳೆದರು. ಒಟ್ಟಿನಲ್ಲಿ ಆರಂಭಿಕ ಆಘಾತದಿಂದ ಕಂಗೆಟ್ಟಿದ್ದ ಭಾರತ ತಂಡಕ್ಕೆ ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ಅವರ ಶತಕದ ಜೊತೆಯಾಟ ದೊಡ್ಡ ಬಲ ನೀಡಿತು. ಒಂದೇ ಪಂದ್ಯದಲ್ಲಿ ಇಬ್ಬರು ಬ್ಯಾಟರ್ಗಳು ಶತಕ ಸಿಡಿಸಿರುವುದು ಇಂಡಿಯಾ ಎ ತಂಡದ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Fri, 20 November 26




