ಅಭಿಷೇಕ್ 9, ಬದೋನಿ 2, ವೈಭವ್ 26; ಭಾರತಕ್ಕೆ ಆರಂಭಿಕ ಆಘಾತ ನೀಡಿದ ನೇಪಾಳ
2026 ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ನೇಪಾಳ ವಿರುದ್ಧ ಭಾರತ ಎ ತಂಡಕ್ಕೆ ಆರಂಭಿಕ ಬ್ಯಾಟಿಂಗ್ ಆಘಾತ ಎದುರಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನೇಪಾಳ, ಅಭಿಷೇಕ್ ಶರ್ಮಾ, ಆಯುಷ್ ಬದೋನಿ ಹಾಗೂ ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನಲುಬು ಮುರಿಯಿತು. ಪ್ರಮುಖ ಆಟಗಾರರು ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಸೇರಿದ್ದು, ತಂಡ ಸಂಕಷ್ಟಕ್ಕೆ ಸಿಲುಕಿದೆ.

2026 ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ನೇಪಾಳ ತಂಡವನ್ನು ಎದುರಿಸಿರುವ ಭಾರತ ಎ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿರುವ ನೇಪಾಳ ಭಾರತದ ಬ್ಯಾಟಿಂಗ್ ಬೆನ್ನೇಲುಬು ಮುರಿದಿದ್ದಾರೆ. ತಂಡದ ಸ್ಫೋಟಕ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ತಂಡವನ್ನು 50 ರನ್ಗಳ ಗಡಿ ದಾಟಿಸುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಬಂದ ಆಯುಷ್ ಬದೋನಿ ಕೂಡ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಅಭಿಷೇಕ್ 9 ರನ್ಗಳಿಗೆ ಔಟ್
ಮೊದಲಿಗೆ ಆರಂಭಿಕ ಅಭಿಷೇಕ್ ಕೇವಲ 9 ರನ್ ಗಳಿಸಿ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. 13 ಎಸೆತಗಳನ್ನು ಎದುರಿಸಿದ ಅಭಿಷೇಕ್, ಒಂದು ಸಿಕ್ಸರ್ ಸಿಡಿಸಿ ಉತ್ತಮ ಆರಂಭ ಪಡೆಯುವ ಸೂಚನೆ ನೀಡಿದ್ದರು. ಆದರೆ ನಂದನ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂದನ್ ಯಾದವ್ ಎಸೆದ ಫುಲ್ ಲೆಂಗ್ತ್ ಎಸೆತವನ್ನು ಲೆಗ್ ಸೈಡ್‌ನತ್ತ ಬಾರಿಸಲು ಅಭಿಷೇಕ್ ಪ್ರಯತ್ನಿಸಿದರು. ಆದರೆ ಬ್ಯಾಟ್‌ಗೆ ಸರಿಯಾಗಿ ಸಿಗದೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಗಾಳಿಯಲ್ಲಿ ಮೇಲಕ್ಕೆ ಚಿಮ್ಮಿತು. ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್ ಹಿಂದಕ್ಕೆ ಓಡಿ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಅಭಿಷೇಕ್ ಅವರ ಇನಿಂಗ್ಸ್‌ಗೆ ತೆರೆ ಎಳೆದರು.
ಮೊದಲ ಪಂದ್ಯದಲ್ಲೇ ಅಭಿಷೇಕ್ ಶರ್ಮಾಗೆ ನಿರಾಸೆ; 9 ರನ್‌ಗೆ ಆಟ ಮುಕ್ತಾಯ
ವೈಭವ್ ಕೂಡ ಕ್ಲೀನ್ ಬೌಲ್ಡ್
ಆ ಬಳಿಕ ಬಂದ ಆಯುಷ್ ಬದೋನಿ 7 ಎಸೆತಗಳನ್ನು ಎದುರಿಸಿ 2 ರನ್ಗಳಿಗೆ ಸ್ಟಂಪ್ ಔಟ್ ಆದರು. ಇದರೊಂದಿಗೆ ಭಾರತ 36 ರನ್ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಹೀಗಾಗಿ ನಾಯಕ ತಿಲಕ್ ವರ್ಮಾ ಮತ್ತು ವೈಭವ್ ಮೇಲೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಬಿದ್ದಿತು. ಆದರೆ ವೈಭವ್ ಕೂಡ 26 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರು. 32 ಎಸೆತಗಳನ್ನು ಎದುರಿಸಿದ ವೈಭವ್, 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಆರಂಭದಲ್ಲಿ ತಮ್ಮ ಸಹಜ ಆಕ್ರಮಣಕಾರಿ ಆಟಕ್ಕೆ ಕಡಿವಾಣ ಹಾಕಿಕೊಂಡಿದ್ದ ವೈಭವ್, ಬಳಿಕ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರು.
ಪವನ್ ಸರಾಫ್ ಬೌಲಿಂಗ್‌ನಲ್ಲಿ ಚೆಂಡನ್ನು ಬಾರಿಸಲು ವೈಭವ್ ಮುಂದಾದರು. ಈ ವೇಳೆ ಮುಂಭಾಗದ ಕಾಲನ್ನು ಸರಿಸಿ ಬ್ಯಾಟ್ ಬೀಸಿದರಾದರೂ, ಚೆಂಡನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಚೆಂಡು ನೇರವಾಗಿ ಲೆಗ್ ಸ್ಟಂಪ್‌ಗೆ ಅಪ್ಪಳಿಸಿತು. ಈ ಮೂಲಕ ವೈಭವ್ ಅವರ ಇನಿಂಗ್ಸ್ ಅಂತ್ಯಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 20 November 26




