ಎಂಟನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಟೂರ್ನಿ (Womens Asia Cup T20) ಅಂತಿಮ ಹಂತಕ್ಕೆ ಬಂದುನಿಂತಿದೆ. ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿರು ಏಷ್ಯಾಕಪ್ ಟೂರ್ನಿಯಲ್ಲಿ ಇಂದು ಭಾರತ ಮಹಿಳಾ ತಂಡ ಹಾಗೂ ಶ್ರೀಲಂಕಾ ಮಹಿಳಾ ತಂಡ (India Women vs Sri Lanka Women) ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಸಿಲ್ಹೆಟ್‌ನಲ್ಲಿರುವ ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದ್ದು, ಹೈವೋಲ್ಟೇಜ್ ಮ್ಯಾಚ್ ಆಗುವುದರಲ್ಲಿ ಅನುಮಾನವಿಲ್ಲ. 2004 ರಲ್ಲಿ ಆರಂಭಗೊಂಡ ಮಹಿಳಾ ಏಷ್ಯಾಕಪ್‌ನಲ್ಲಿ ಇದುವರೆಗೆ ಏಳು ಆವೃತ್ತಿಗಳು ನಡೆದಿವೆ. ಇದರಲ್ಲಿ ಆರು ಸೀಸನ್ ಭಾರತ ಗೆದ್ದಿದ್ದರೆ ಹಿಂದಿನ ಸೀಸನ್ನಲ್ಲಿ ಬಾಂಗ್ಲಾ ಚಾಂಪಿಯನ್ ಆಗಿತ್ತು. ಇದೀಗ ಭಾರತಕ್ಕೆ ಏಳನೇ ಬಾರಿ ಕಪ್ ಗೆಲ್ಲುವ ಅವಕಾಶ ಬಂದೊದಗಿದೆ. ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬಲಿಷ್ಠವಾಗಿರುವ ಹರ್ಮನ್‌ಪ್ರೀತ್ ಪಡೆ (Harmanpreet Kaur) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಟೀಮ್ ಇಂಡಿಯಾಕ್ಕೆ ಮುಖ್ಯ ತಲೆನೋವು ಓಪನರ್ಗಳು. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಉತ್ತಮ ಆರಂಭ ಒದಗಿಸುತ್ತಿಲ್ಲ. ಇಬ್ಬರ ಪೈಕಿ ಒಬ್ಬರು ಬೇಗನೆ ನಿರ್ಗಮಿಸುತ್ತಿದ್ದಾರೆ. ಇಂದು ಫೈನಲ್ ಪಂದ್ಯ ಆಗಿರುವುದರಿಂದ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಜಮಿಯಾ ರೋಡ್ರಿಗೆಸ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಪೂಜಾ ವಸ್ತ್ರಾಕರ್ ಹಾಗೂ ದೀಪ್ತಿ ಶರ್ಮಾ ಕೂಡ ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಅದರಲ್ಲೂ ದೀಪ್ತಿ ಬೌಲಿಂಗ್ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ದೀಪ್ತಿ ಶರ್ಮಾ ತಂಡದ ಪ್ರಮುಖ ಬೌಲಿಂಗ್ ಆಸ್ತಿ. ಇವರಿಗೆ ಸ್ನೇಹ್ ರಾಣ, ರಾಧಾ ಯಾದವ್ ಹಾಗೂ ರೇಣುಕಾ ಸಿಂಗ್ ಸಾಥ್ ನೀಡಬೇಕಿದೆ.
ಇತ್ತ ಶ್ರೀಲಂಕಾ ಮಹಿಳಾ ತಂಡ ಕಷ್ಟಪಟ್ಟು ಫೈನಲ್ಗೆ ತಲುಪಿದೆ. 14 ವರ್ಷಗಳ ನಂತರ ಏಷ್ಯಾಕಪ್‌ನಲ್ಲಿ ಫೈನಲ್ ಆಡುತ್ತಿರುವ ಲಂಕಾ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 1 ರನ್ಗಳ ರೋಚಕ ಜಯ ಸಾಧಿಸಿತ್ತು. ಬ್ಯಾಟಿಂಗ್ನಲ್ಲಿ ಅಷ್ಟೇನು ಮ್ಯಾಜಿಕ್ ಮಾಡದ ಸಿಂಹಳೀಯರು ಬೌಲಿಂಗ್ನಲ್ಲಿ ಮಾರಕವಾಗಿದ್ದಾರೆ.
ಚಮಿರಾ ಅಟಪಟ್ಟು ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಸಿನಿ ಪೆರೇರಾ, ಹರ್ಷಿತಾ ಮಾದವಿ, ಅನುಷ್ಕಾ ಸಂಜೀವನಿ ಪ್ರಮುಖ ಬ್ಯಾಟರ್ಗಳಾದರೆ, ಇನೋಕಾ ರಣವೀರಾ, ಅಚಿನಿ ಕುಲಸೂರ್ಯ, ರಶ್ಮಿ ಸಿಲ್ವಾ ಬೌಲರ್ಗಳಾಗಿದ್ದಾರೆ. ಈ ಬಾರಿ ಪುರುಷರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಮಹಿಳಾ ತಂಡ ಫೈನಲ್ನಲ್ಲಿ ಯಾವರೀತಿ ಆಟ ಆಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.
ಈ ಟೂರ್ನಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಕೇವಲ ಒಂದು ಸೋಲನ್ನು ಮಾತ್ರ ಅನುಭವಿಸಿದೆ. ಪಾಕಿಸ್ತಾನದ ವಿರುದ್ಧ ಭಾರತ ಲೀಗ್ ಹಂತದಲ್ಲಿ ಸೋಲು ಕಂಡಿತ್ತು. ಆದರೆ ಶ್ರೀಲಂಕಾ ತಂಡ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಶರಣಾಗಿತ್ತು. ಉಭಯ ತಂಡಗಳು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ 22 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ ತಂಡ ಸ್ಪಷ್ಟ ಮೇಲುಗೈ ಹೊಂದಿದ್ದು ಶ್ರೀಲಂಕಾ ವಿರುದ್ಧ 17 ಬಾರಿ ಗೆಲುವು ಸಾಧಿಸಿದೆ. ಶ್ರೀಲಂಕಾ ತಂಡ ಕೇವಲ 4 ಬಾರಿ ಗೆದ್ದಿದೆ, ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ.
ಸಂಭಾವ್ಯ ಪ್ಲೇಯಿಂಗ್ XI
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚ್ಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ರೇಣುಕಾ ಸಿಂಗ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್.
ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಮಲ್ಶಾ ಶೆಹಾನಿ, ರಶ್ಮಿ ಸಿಲ್ವಾ, ಓಶದಿ ರಣಸಿಂಗ್, ಇನೋಕಾ ರಣವೀರ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.
Published On - 8:02 am, Sat, 15 October 22