SL-W vs PAK-W: ಪಾಕ್ ಮಹಿಳಾ ತಂಡದ ವಿರುದ್ಧ 1 ರನ್ ರೋಚಕ ಜಯ ಸಾಧಿಸಿದಾಗ ಶ್ರೀಲಂಕಾ ಪ್ಲೇಯರ್ಸ್ ಏನು ಮಾಡಿದ್ರು ನೋಡಿ
Women's Asia Cup T20: 16ನೇ ಓವರ್ ವರೆಗಯೂ ಪಂದ್ಯ ಪಾಕಿಸ್ತಾನದ ಕೈಯಲ್ಲೇ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಪವಾಡವೇ ನಡೆಯಿತು. 1 ರನ್‌ಗಳ ಗೆಲುವು ಸಾಧಿಸಿದ ಸಂದರ್ಭ ಶ್ರೀಲಂಕಾ ಮಹಿಳೆಯರು ಏನು ಮಾಡಿದರು ನೋಡಿ.
ಮಹಿಳೆಯರ ಏಷ್ಯಾಕಪ್ ಟಿ20 2022 (Women’s Asia Cup T20) ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಗುರುವಾರ ಸೈಲೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಥೈಲೆಂಡ್ ವಿರುದ್ಧ ಭಾರತ ಮಹಿಳಾ ತಂಡ (India Women vs Thailand Women) 74 ರನ್‌ಗಳ ಭರ್ಜರಿ ಜಯ ಸಾಧಿಸಿದರೆ, ದ್ವಿತೀಯ ಸೆಮೀಸ್ನಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಮಹಿಳಾ ತಂಡ (Sri Lanka Women vs Pakistan Women) 1 ರನ್‌ಗಳ ರೋಚಕ ಗೆಲುವು ಕಂಡಿತು. ಈ ಮೂಲಕ ಶನಿವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡ ಮುಖಾಮುಖಿ ಆಗಲಿದೆ. ಶ್ರೀಲಂಕಾ ವನಿತೆಯರ ತಂಡ 14 ವರ್ಷಗಳ ನಂತರ ಏಷ್ಯಾಕಪ್‌ನಲ್ಲಿ ಫೈನಲ್ ತಲುಪಲಿದೆ. ಸೆಮೀಸ್ನಲ್ಲಿ ಪಾಕ್ ವಿರುದ್ಧ ಗೆಲುವು ಸಾಧಿಸುತ್ತೇವೆ ಎಂದು ಸ್ವತಃ ಲಂಕಾನ್ನರು ಕೂಡ ಅಂದುಕೊಂಡಿರಲಿಲ್ಲ. ಯಾಕೆಂದರೆ 16ನೇ ಓವರ್ ವರೆಗಯೂ ಪಂದ್ಯ ಪಾಕಿಸ್ತಾನದ ಕೈಯಲ್ಲೇ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಪವಾಡವೇ ನಡೆಯಿತು. 1 ರನ್‌ಗಳ ಗೆಲುವು ಸಾಧಿಸಿದ ಸಂದರ್ಭ ಶ್ರೀಲಂಕಾ ಮಹಿಳೆಯರು ಏನು ಮಾಡಿದರು ನೋಡಿ.
ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಲಂಕಾ ವನಿತೆಯರ ಖುಷಿಗೆ ಪಾರವೇ ಇರಲಿಲ್ಲ. ಪಂದ್ಯ ಮುಗಿದ ಬಳಿಕ ಈ ಸಂಭ್ರಮವನ್ನು ಆಟಗಾರ್ತಿಯರು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಮುಗಿದ ಬಳಿಕ ಲಂಕಾ ಮಹಿಳಾ ತಂಡದ ಆಟಗಾರ್ತಿಯರು ಮೈದಾನದಲ್ಲೇ ನೃತ್ಯ ಮಾಡುವ ಮೂಲಕ ಸೆಲೆಬ್ರೆಟ್ ಮಾಡಿದ್ದಾರೆ. ಶ್ರೀಲಂಕಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
#ApeKello celebrating in style ?
Sri Lanka qualified for the finals of the Women’s #AsiaCup2022 after winning against Pakistan by 1 run. pic.twitter.com/WXHkGcQJdd
— Sri Lanka Cricket ?? (@OfficialSLC) October 13, 2022
ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶ್ರೀಲಂಕಾ ಸವಾಲಿನ ಟಾರ್ಗೆಟ್ ನೀಡಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗಳಿಸಿದ್ದು ಕೇವಲ 122 ರನ್ ಮಾತ್ರ. ಹರ್ಷಿತಾ ಸಮರವಿಕ್ರಮ 41 ಎಸೆತಗಳಲ್ಲಿ 35 ರನ್ ಮತ್ತು ಅನುಷ್ಕಾ ಸಂಜೀವನಿ 21 ಎಸೆತಗಳಲ್ಲಿ 26 ರನ್‌ಗಳ ಕೊಡುಗೆ ನೀಡಿದರು. ಉಳಿದವರ ಸ್ಕೋರ್ 15ರ ಗಡಿ ದಾಟಲಿಲ್ಲ. ಪಾಕಿಸ್ತಾನದ ಪರವಾಗಿ ನಶ್ರಾ ಸಂಧು 17 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಿದಾ ದಾರ್, ಸಾದಿಯಾ ಇಕ್ಬಾಲ್ ಮತ್ತು ಐಮನ್ ಅನ್ವರ್ ತಲಾ ಒಂದು ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಇದ್ದ ಪಂದ್ಯದಲ್ಲಿ ಪಾಕಿಸ್ತಾನವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ ವನಿತೆಯರು ಪಾಕಿಸ್ತಾನವನ್ನು ಕೇವಲ 1 ರನ್‌ಗಳ ಅಂತರದಲ್ಲಿ ಸೋಲಿಸುವಲ್ಲಿ ಯಶಸ್ವಿಯಾದರು. 123 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವನಿತೆಯರು ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ (9) ಬೇಗನೆ ಔಟಾದ ಕಾರಣ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಮುನೀಬಾ ಅಲಿ 10 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮ ಆರಂಭ ಪಡೆದರು, ಹೆಚ್ಚಿನ ರನ್ ಗಳಿಸುವಲ್ಲಿ ವಿಫಲರಾದರು.
ಆದರೂ 16ನೇ ಓವರ್ ತನಕ ಪಂದ್ಯ ಪಾಕಿಸ್ಥಾನದ ಕೈಯಲ್ಲೇ ಇತ್ತು. ಆಗ 3 ವಿಕೆಟಿಗೆ ಭರ್ತಿ 100 ರನ್ ಆಗಿತ್ತು. ಅನುಭವಿಗಳಾದ ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ಕ್ರೀಸ್ ಆಕ್ರಮಿಸಿಕೊಂಡಿದ್ದರಿಂದ ಪಾಕ್‌ಗೆ ಗೆಲುವು ಖಂಡಿತ ಅಸಾಧ್ಯವಾಗಿರಲಿಲ್ಲ. ಅಂತಿಮ 3 ಓವರ್‌ಗಳಲ್ಲಿ 18 ರನ್ ತೆಗೆಯುವ ಸವಾಲು ಎದುರಾಯಿತು. ಈ ಹಂತದಲ್ಲಿ ಸುಗಂಧಿಕಾ ಕುಮಾರಿ ಪಾಕ್ ನಾಯಕಿ ಬಿಸ್ಮಾ (42) ವಿಕೆಟ್ ಕೀಳುವ ಜತೆಗೆ ಕೇವಲ 5 ರನ್ ನೀಡಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.
19ನೇ ಓವರ್‌ನ ಮೊದಲ ಎಸೆತದಲ್ಲೇ ಆಯೇಶಾ ನಸೀಮ್ ಔಟಾದ್ದು ಮಾತ್ರವಲ್ಲದೆ ರಣವೀರ ನೀಡಿದ್ದು ಕೇವಲ 4 ರನ್. ಹೀಗಾಗಿ ಅಂತಿಮ ಓವರ್‌ನಲ್ಲಿ ಪಾಕ್ ಗೆಲುವಿಗೆ 9 ರನ್ ಬೇಕಾಯಿತು. 20ನೇ ಓವರ್‌ನಲ್ಲಿ ಅಶಿನಿ ಕುಲಸೂರ್ಯ ಕಠಿಣ ಬೌಲಿಂಗ್ ಮಾಡಿದರು. ಕೊನೆಯ ಎಸೆತದಲ್ಲಿ 3 ರನ್ ಬೇಕಾಗಿದ್ದಾಗ ಎರಡನೇ ರನ್ ತೆಗೆಯುವ ವೇಳೆ ರನೌಟ್ ಆಗಿದ್ದು ಶ್ರೀಲಂಕಾ ಗೆದ್ದು ಬೀಗಿತು.
Published On - 7:50 am, Fri, 14 October 22