IPL 2023: ಮಹಿಳಾ ಐಪಿಎಲ್ನಲ್ಲಿ 5 ತಂಡಗಳು..!
IPL 2023: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಹಿಳಾ ಐಪಿಎಲ್ ತಂಡಗಳ ಖರೀದಿಗೆ ಆಸಕ್ತಿ ಹೊಂದಿದೆ. ಹೀಗಾಗಿ ಈ ಎರಡು ತಂಡಗಳು ಮಹಿಳಾ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಹಿಳಾ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ (BCCI) ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರಂತೆ ಮೊದಲ ಸೀಸನ್ ಮುಂದಿನ ವರ್ಷ ನಡೆಯಲಿದ್ದು, ಈ ವೇಳೆ ಒಟ್ಟು 5 ತಂಡಗಳು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಫೆಬ್ರವರಿ 10 ರಿಂದ 26 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದ್ದು, ಇದಾದ ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಅದರಂತೆ ಮಾರ್ಚ್ನಲ್ಲಿ ಪುರುಷರ ಐಪಿಎಲ್ ಆರಂಭಕ್ಕೂ ಮುನ್ನ ಮಹಿಳಾ ಐಪಿಎಲ್ ನಡೆಸಲು ತಾತ್ಕಾಲಿಕ ಪ್ಲ್ಯಾನ್ಗಳನ್ನು ರೂಪಿಸಲಾಗುತ್ತಿದೆ.
ಇನ್ನು ಪುರುಷರ ಐಪಿಎಲ್ನಂತೆ ಮಹಿಳಾ ಟೂರ್ನಿಯಲ್ಲೂ ವಿದೇಶಿ ಆಟಗಾರ್ತಿಯರಿಗೆ ಅವಕಾಶ ಇರಲಿದೆ. ಇಲ್ಲಿ ಪ್ರತಿ ತಂಡಗಳಲ್ಲಿ ನಾಲ್ವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಬಹುದು. ಇದಾಗ್ಯೂ ಐಪಿಎಲ್ ತಂಡಗಳ ಹೆಸರುಗಳನ್ನಾಗಲಿ ಅಥವಾ ನಗರಗಳನ್ನಾಗಲಿ ನಿರ್ಧರಿಸಿಲ್ಲ.
ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಹಿಳಾ ಐಪಿಎಲ್ ತಂಡಗಳ ಖರೀದಿಗೆ ಆಸಕ್ತಿ ಹೊಂದಿದೆ. ಹೀಗಾಗಿ ಪ್ರಸ್ತುತ ಐಪಿಎಲ್ ತಂಡಗಳ ಹೆಸರಿನಲ್ಲೇ ಐದು ಟೀಮ್ಗಳು ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ. ಹಾಗೆಯೇ ಮಹಿಳಾ ಐಪಿಎಲ್ ಅನ್ನು ಎರಡು ಸ್ಟೇಡಿಯಂಗಳಲ್ಲಿ ಮಾತ್ರ ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಂದರೆ ಮಹಿಳಾ ಐಪಿಎಲ್ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಇರಲಿದೆ. ಈ ಪಂದ್ಯಗಳನ್ನು ಭಾರತದ ಎರಡು ನಗರಗಳ ಸ್ಟೇಡಿಯಂಗಳಲ್ಲಿ ಟೂರ್ನಿಯನ್ನು ಆಯೋಜಿಸಲು ಚಿಂತಿಸಲಾಗಿದೆ. ಸದ್ಯ ಮಹಿಳಾ ಐಪಿಎಲ್ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಹೀಗಾಗಿ ಡಿಸೆಂಬರ್ನಲ್ಲಿ ಐದು ತಂಡಗಳ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.