5+3+3 ಸಂಯೋಜನೆ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಟಿ20 ಸರಣಿಗಾಗಿ ಸಜ್ಜಾಗಿ ನಿಂತಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಲಕ್ನೋನಲ್ಲಿ ನಡೆದರೆ, ದ್ವಿತೀಯ ಪಂದ್ಯ ರಾಂಚಿಯಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯ ಇಂದೋರ್, ನಾಲ್ಕನೇ ಮ್ಯಾಚ್ ಹೈದರಾಬಾದ್​ನಲ್ಲಿ ನಡೆಯಲಿದೆ. ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

5+3+3 ಸಂಯೋಜನೆ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India
Image Credit source: x.com

Updated on: Oct 05, 2026 | 2:41 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಬಹುನಿರೀಕ್ಷಿತ ಐದು ಪಂದ್ಯಗಳ ಟಿ20 ಸರಣಿ ನಾಳೆಯಿಂದ (ಅ.6) ಶುರುವಾಗಲಿದೆ. ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ 5+3+3 ಸೂತ್ರದಲ್ಲಿ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅಂದರೆ ಐವರು ಬ್ಯಾಟರ್​ಗಳು, ಮೂವರು ಆಲ್​ರೌಂಡರ್​ಗಳು ಹಾಗೂ ಮೂವರು ಬೌಲರ್​ಗಳು ಆಡುವ ಬಳಗದಲ್ಲಿ ಇರಲಿದ್ದಾರೆ.

ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವುದು ಖಚಿತ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದರೆ, ಐದನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ.

ಇನ್ನು ಆಲ್​ರೌಂಡರ್​ಗಳಾಗಿ ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಹಾಗೂ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ಅಭಿಷೇಕ್ ಶರ್ಮಾ
  2.  ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  3. ಇಶಾನ್ ಕಿಶನ್
  4. ಶ್ರೇಯಸ್ ಅಯ್ಯರ್ (ನಾಯಕ)
  5.  ತಿಲಕ್ ವರ್ಮಾ (ಉಪನಾಯಕ)
  6.  ಶಿವಂ ದುಬೆ
  7. ನಿತೀಶ್ ಕುಮಾರ್ ರೆಡ್ಡಿ
  8. ಅಕ್ಷರ್ ಪಟೇಲ್
  9.  ಕುಲ್ದೀಪ್ ಯಾದವ್
  10. ಅರ್ಷದೀಪ್ ಸಿಂಗ್
  11. ಮಯಾಂಕ್ ಯಾದವ್.

ಇದನ್ನೂ ಓದಿ: ಭಾರತ vs ವಿಂಡೀಸ್ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ನಾಯಕ), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಪಿಚ್ ರಿಪೋರ್ಟ್​:

ಲಕ್ನೋದ ಏಕನಾ ಮೈದಾನದ ಪಿಚ್ ಸಾಂಪ್ರದಾಯಿಕವಾಗಿ ನಿಧಾನಗತಿಯ ಮತ್ತು ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗುವ ಮೇಲ್ಮೈಗೆ ಹೆಸರುವಾಸಿಯಾಗಿದೆ. ಈ ಪಂದ್ಯದಲ್ಲೂ ಪಿಚ್‌ನ ಸ್ವರೂಪ ಮತ್ತು ಕ್ರೀಡಾಂಗಣದ ದೊಡ್ಡ ಬೌಂಡರಿಗಳು ಬ್ಯಾಟರ್‌ಗಳಿಗೆ ಸುಲಭವಾಗಿ ರನ್ ಗಳಿಸಲು ಸವಾಲೊಡ್ಡುವ ಸಾಧ್ಯತೆ ಇದೆ.

ಸ್ಪಿನ್ನರ್‌ಗಳ ಮೇಲುಗೈ: ಪವರ್‌ಪ್ಲೇ ಮುಗಿಯುತ್ತಿದ್ದಂತೆ ಚೆಂಡು ಪಿಚ್‌ನಲ್ಲಿ ಹೆಚ್ಚು ಗ್ರಿಪ್ ಪಡೆಯಲು ಆರಂಭಿಸುತ್ತದೆ. ಇದರಿಂದಾಗಿ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ಪಂದ್ಯದ ಗತಿಯನ್ನು ನಿರ್ಧರಿಸಲಿದೆ. ಭಾರತದ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವೆಸ್ಟ್ ಇಂಡೀಸ್‌ನ ಅಕೀಲ್ ಹೊಸೈನ್, ಗುಡಾಕೇಶ್ ಮೋಟಿ ಅವರಂತಹ ಸ್ಪಿನ್ನರ್‌ಗಳಿಗೆ ಈ ಪಿಚ್ ಸ್ವರ್ಗವೆನಿಸಬಹುದು.

ಬ್ಯಾಟಿಂಗ್ ಸವಾಲು: ಹಳೆಯ ಚೆಂಡಿನಲ್ಲಿ ದೊಡ್ಡ ಶಾಟ್‌ಗಳನ್ನು ಹೊಡೆಯುವುದು ಇಲ್ಲಿ ಕಷ್ಟ. ಬ್ಯಾಟರ್‌ಗಳು ಪವರ್‌ಪ್ಲೇ ಓವರ್‌ಗಳ ಗರಿಷ್ಠ ಲಾಭ ಪಡೆಯುವುದು ಅತ್ಯಗತ್ಯ. ಈ ಪಿಚ್‌ನಲ್ಲಿ 165–175 ರನ್ ಗಳಿಸಿದರೆ ಅದನ್ನು ಅತ್ಯುತ್ತಮ ಹಾಗೂ ಸ್ಪರ್ಧಾತ್ಮಕ ಮೊತ್ತ  ಎಂದು ಪರಿಗಣಿಸಬಹುದು.

ಟಾಸ್ ಪಾತ್ರ: ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಹೆಚ್ಚಿನ ಯಶಸ್ಸು ಕಂಡಿವೆ. ಕಳೆದ 9 ಪಂದ್ಯಗಳಲ್ಲಿ 5 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಪಂದ್ಯ ಸಾಗುತ್ತಿದ್ದಂತೆ ಪಿಚ್ ಮತ್ತಷ್ಟು ನಿಧಾನವಾಗುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಬಹುದು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us