INDW vs AUSW: ಸ್ಮೃತಿ- ಶಫಾಲಿ ಅರ್ಧಶತಕ; ಆಸೀಸ್ ವಿರುದ್ಧ ಭಾರತಕ್ಕೆ 9 ವಿಕೆಟ್​ಗಳ ಭರ್ಜರಿ ಜಯ..!

|

Updated on: Jan 05, 2024 | 10:22 PM

INDW vs AUSW: ಮುಂಬೈನ ವಾಂಖೆಡೆಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್​​ಪ್ರೀತ್ ಕೌರ್ ಪಡೆ 9 ವಿಕೆಟ್​ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

INDW vs AUSW: ಸ್ಮೃತಿ- ಶಫಾಲಿ ಅರ್ಧಶತಕ; ಆಸೀಸ್ ವಿರುದ್ಧ ಭಾರತಕ್ಕೆ 9 ವಿಕೆಟ್​ಗಳ ಭರ್ಜರಿ ಜಯ..!
ಭಾರತ ವನಿತಾ ತಂಡ
Follow us on

ಮುಂಬೈನ ವಾಂಖೆಡೆಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (Australia Women vs India Women) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್​​ಪ್ರೀತ್ ಕೌರ್ ಪಡೆ 9 ವಿಕೆಟ್​ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಿ, ಆಸೀಸ್ ತಂಡವನ್ನು 142 ರನ್​ಗಳಿಗೆ ಕಟ್ಟಿಹಾಕಿತು. ತಂಡದ ಪರ ಬೌಲಿಂಗ್​ನಲ್ಲಿ ಗಮರ್ನಾಹ ಪ್ರದರ್ಶನ ನೀಡಿದ ಟಿಟಾಸ್ ಸಾದು (Titas Sadhu) 4 ಓವರ್​ಗಳಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಇನ್ನು ಈ ಗುರಿ ಬೆನ್ನಟ್ಟಿದ ಭಾರತ ಆರಂಭಿಕರಿಬ್ಬರ ಅರ್ಧಶತಕದ ನೆರವಿನಿಂದ 17.4 ಓವರ್​ಗಳಲ್ಲಿ ಸುಲಭವಾಗಿ ಜಯದ ನಗೆ ಬೀರಿತು.

ಆಸೀಸ್​ಗೆ ಆರಂಭಿಕ ಆಘಾತ

ಮೇಲೆ ಹೇಳಿದಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪ್ರಮುಖ 4 ವಿಕೆಟ್​ಗಳು ಕೇವಲ 33 ರನ್​ಗಳಿಗೆ ಪತನಗೊಂಡವು. ಹೀಗಾಗಿ ಆಸೀಸ್ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ತಂಡದ ಪರ ಅಲಿಸ್ಸಾ ಪೆರ್ರಿ ಮತ್ತು ಫೋಬೆ ಲಿಚ್‌ಫೀಲ್ಡ್ ಹೊರತುಪಡಿಸಿ ಪ್ರಮುಖ ಬ್ಯಾಟರ್​ಗಳು ಬೇಗನೆ ಔಟಾದರು. ಅಲಿಸ್ಸಾ ಹೀಲಿ 8, ಬೆತ್ ಮೂನಿ 17, ತಹಿಲಾ ಮೆಕ್‌ಗ್ರಾತ್ 0, ಆಶ್ಲೇ ಗಾರ್ಡ್ನರ್ 0 ಮತ್ತು ಗ್ರೇಸ್ ಹ್ಯಾರಿಸ್ 1 ರನ್ ಗಳಿಸಲಷ್ಟೇ ಶಕ್ತರಾದರು.

4 ವಿಕೆಟ್ ಪಡೆದ ಟಿಟಾಸ್ ಸಾದು

ಆದರೆ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಫೋಬೆ ಲಿಚ್‌ಫೀಲ್ಡ್ 49 ರನ್ ಗಳಿಸಿದರೆ, ಅಲಿಸ್ಸಾ ಪೆರ್ರಿ 37 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಜೊತೆಯಾಟವು ಆಸ್ಟ್ರೇಲಿಯವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ಯಿತು. ಭಾರತದ ಪರ ಟಿಟಾಸ್ ಸಾದು (4 ವಿಕೆಟ್) ಹೊರತುಪಡಿಸಿ ಕನ್ನಡತಿ ಶ್ರೇಯಾಂಕ ಪಾಟೀಲ್ 3.2 ಓವರ್​ ಬೌಲ್ ಮಾಡಿ 19 ರನ್ ನೀಡಿ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 4 ಓವರ್ ಬೌಲ್ ಮಾಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಬ್ಯಾಟಿಂಗ್​ನಲ್ಲೂ ಕಮಾಲ್

ಮೊದಲು ಬೌಲಿಂಗ್​ನಲ್ಲಿ ಭಾರತದ ಬೌಲರ್‌ಗಳು ಅದ್ಬುತವಾಗಿ ಬೌಲಿಂಗ್ ಮಾಡಿದರೆ, 142 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯದ ಮೊದಲ ಓವರ್‌ನಿಂದಲೇ ಆರಂಭಿಕರಿಬ್ಬರು ಆಸ್ಟ್ರೇಲಿಯಾದ ಮೇಲೆ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲ ಓವರ್‌ನಲ್ಲಿಯೇ ಲಯ ಕಳೆದುಕೊಂಡು 14 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿತು.

ಈ ಪಂದ್ಯದಲ್ಲಿ ಶಫಾಲಿ ವರ್ಮಾ 44 ಎಸೆತಗಳಲ್ಲಿ 64 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರೆ, ಮಂಧಾನ ಕೂಡ 52 ಎಸೆತಗಳಲ್ಲಿ 54 ರನ್ ಗಳಿಸಿದರು. ಟೀಂ ಇಂಡಿಯಾಗೆ ಈ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆಲ್ಲುವ ಅವಕಾಶವಿತ್ತು. ಆದರೆ ಟೀಂ ಇಂಡಿಯಾ ಗೆಲುವಿಗೆ ಕೇವಲ 5 ರನ್‌ಗಳ ಅಂತರದಲ್ಲಿದ್ದಾಗ ಸ್ಮೃತಿ ಮಂಧಾನ ಬಿಗ್ ಶಾಟ್ ಆಡುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಅಂತಿಮವಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Fri, 5 January 24