IPL 2022: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ

| Updated By: ಝಾಹಿರ್ ಯೂಸುಫ್

Updated on: May 22, 2022 | 7:47 PM

Delhi Capitals: ಮುಂಬೈ ಇಂಡಿಯನ್ಸ್ ವಿರುದ್ದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರುವ ಅವಕಾಶವಿದ್ದರೂ, ಇಲ್ಲೂ ಕೂಡ ಬ್ಯಾಟ್ಸ್​ಮನ್​ಗಳೇ ಕೈಕೊಟ್ಟಿದ್ದರು.

IPL 2022: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ
Delhi Capitals
Follow us on

IPL 2022: ಈ ಬಾರಿಯ ಐಪಿಎಲ್​ನಲ್ಲಿ ಬಲಿಷ್ಠ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಕೂಡ ಮುಂಚೂಣಿಯಲ್ಲಿತ್ತು. ಇದಕ್ಕೆ ಕಾರಣ ತಂಡಕ್ಕೆ ಡೇವಿಡ್ ವಾರ್ನರ್​ನಂತಹ ಸ್ಟಾರ್ ಆಟಗಾರನ ಆಗಮನ, ಮ್ಯಾಚ್​ ವಿನ್ನರ್ ಮಿಚೆಲ್ ಮಾರ್ಷ್ ಎಂಟ್ರಿ, ಸ್ಪೋಟಕ ದಾಂಡಿಗ ರೋವ್ಮೆನ್ ಪೊವೆಲ್…ಹೀಗೆ ಎಲ್ಲಾ ರೀತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಮತೋಲನದಿಂದ ಕೂಡಿದ ತಂಡವಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಸೋಲುವ ಮೂಲಕ ಡೆಲ್ಲಿ ಪ್ಲೇಆಫ್​ ಪ್ರವೇಶಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಅಂದರೆ ಈ ಬಾರಿ ಡೆಲ್ಲಿ 14 ಪಂದ್ಯಗಳಲ್ಲಿ ಗೆದ್ದಿದ್ದು 7 ಪಂದ್ಯಗಳಲ್ಲಿ ಮಾತ್ರ. ಹಾಗಿದ್ರೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಉತ್ತಮ ಪ್ರದರ್ಶನ ಮೂಡಿಬರದಿರಲು ಕಾರಣವೇನು ನೋಡೋಣ…

ಪ್ರಮುಖ ಆಟಗಾರರ ಅನುಪಸ್ಥಿತಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿ ಐಪಿಎಲ್ ಅಭಿಯಾನ ಆರಂಭಿಸಿತ್ತು. ಆ ಬಳಿಕ 2 ಪಂದ್ಯಗಳನ್ನು ಸೋತರೂ, ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಇಲ್ಲಿ ಆರಂಭಿಕ ಹಂತದ ಮೂರು ಸೋಲಿಗೆ ಮುಖ್ಯ ಕಾರಣವೆಂದರೆ ತಂಡದಲ್ಲಿದ್ದ ಪ್ರಮುಖ ಆಟಗಾರರ ಅನುಪಸ್ಥಿತಿ. ಏಕೆಂದರೆ ಡೆಲ್ಲಿ ತಂಡದ ಆಧಾರಸ್ತಂಭಗಳಾಗಿ ಗುರುತಿಸಿಕೊಂಡಿದ್ದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಅನ್ರಿಕ್ ನೋಕಿಯಾ, ಮುಸ್ತಫಿಜುರ್ ರೆಹಮಾನ್ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇತ್ತ ಚೊಚ್ಚಲ ಬಾರಿಗೆ ಐಪಿಎಲ್​ನಲ್ಲಿ ಅವಕಾಶ ಪಡೆದಿದ್ದ ರೋವ್ಮೆನ್ ಪೊವೆಲ್ ಆರಂಭಿಕ ಪಂದ್ಯಗಳಿಗೆ ವಿಫಲರಾಗಿದ್ದರು. ಪ್ರಮುಖ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಡೆಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಅಂದರೆ ಸ್ಟಾರ್ ಆಟಗಾರರ ಕೊರತೆ ಡೆಲ್ಲಿ ತಂಡದ ಆರಂಭಿಕ ಪಂದ್ಯಗಳ ಸೋಲಿಗೆ ಕಾರಣವಾಯಿತು.

ಕೊರೋನಾತಂಕ: ಗೆಲುವು ಸೋಲುಗಳ ನಡುವಣ ಹಾವು-ಏಣಿಯಾಟವಾಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಕೂಡ ಪರಿಣಾಮ ಬೀರಿತು ಎಂದರೆ ತಪ್ಪಾಗಲಾರದು. ಏಕೆಂದರೆ ಪಂದ್ಯ ಆರಂಭಕ್ಕೂ ಮುನ್ನ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕ ಎದುರಾಗಿತ್ತು. ಅಷ್ಟೇ ಅಲ್ಲದೆ ಪಂದ್ಯವನ್ನು ಸ್ಥಳಾಂತರಿಸುವ ಮೂಲಕ ಡೆಲ್ಲಿ ಬೇರೆ ಮೈದಾನದಲ್ಲಿ ಪಂದ್ಯವಾಡಬೇಕಾಯಿತು. ನಿರಂತರವಾಗಿ ತಂಡದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಕ್ವಾರಂಟೈನ್​ಗೆ ಒಳಗಾಗಿದ್ದು…ಇವೆಲ್ಲವೂ ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರರ ಮೇಲೆ ಮಾನಸಿಕ ಪರಿಣಾಮ ಬೀರಿರುವುದರಲ್ಲಿ ಅನುಮಾನವೇ ಇಲ್ಲ.

ಬ್ಯಾಟ್ಸ್​ಮನ್​ಗಳ ವೈಫಲ್ಯ: ಪ್ರಮುಖ ಆಟಗಾರರ ಅನುಪಸ್ಥಿತಿ ಹಾಗೂ ಕೊರೋನಾತಂಕ ಒಂದೆಡೆಯಾದರೆ, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟ್ಸ್​ಮನ್​ಗಳು ಸಂಪೂರ್ಣ ಕೈಕೊಟ್ಟಿದ್ದರು. ಇದಕ್ಕೆ ಉತ್ತಮ ಉದಾಹರಣೆ ತಂಡದ ಬ್ಯಾಟ್ಸ್​ಮನ್​ಗಳ ಅಂಕಿ ಅಂಶಗಳು. ಏಕೆಂದರೆ 12 ಪಂದ್ಯವಾಡಿರುವ ಡೇವಿಡ್ ವಾರ್ನರ್ 432 ರನ್​ಗಳಿಸಿದ್ದು ಬಿಟ್ಟರೆ, ಉಳಿದ ಯಾವುದೇ ಬ್ಯಾಟ್ಸ್​ಮನ್​ಗಳು 400 ರ ಗಡಿದಾಟಿಲ್ಲ. ಇನ್ನು ಮುನ್ನೂರು ರನ್​ಗಳ ಗಡಿದಾಟಿದ್ದು ರಿಷಭ್ ಪಂತ್ ಮಾತ್ರ. ಪಂತ್ 14 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 340 ರನ್​ ಮಾತ್ರ. ಉಳಿದ ಎಲ್ಲಾ ಬ್ಯಾಟ್ಸ್​ಮನ್​ ಕಳಪೆ ಪ್ರದರ್ಶನ ನೀಡಿದ್ದರು.

ಗಾಯ ಮತ್ತು ವೈಫಲ್ಯ: ಈ ಬಾರಿ ಡೆಲ್ಲಿ ಪರ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ಅನ್ರಿಕ್ ನೋಕಿಯಾ ಗಾಯದ ಕಾರಣ ಆಡಿದ್ದು ಕೇವಲ 6 ಪಂದ್ಯ ಮಾತ್ರ. ಹಾಗೆಯೇ ಪಡೆದಿದ್ದು ಕೇವಲ 9 ವಿಕೆಟ್. ಇನ್ನು ಪೃಥ್ವಿ ಶಾ ಕೂಡ ಜ್ವರದ ನಿಮಿತ್ತ 4 ಪಂದ್ಯಗಳಿಂದ ಹೊರಗುಳಿದಿದ್ದರು. ಇದಾಗ್ಯೂ ಕುಲ್ದೀಪ್ ಯಾದವ್ (21 ವಿಕೆಟ್), ಖಲೀಲ್ ಅಹ್ಮದ್ (16) ಹಾಗೂ ಶಾರ್ದೂಲ್ ಠಾಕೂರ್ (15) ಉತ್ತಮ ಬೌಲಿಂಗ್ ಮಾಡಿದ್ದರೂ, ರಿಟೈನ್ ಆಗಿದ್ದ ಅಕ್ಷರ್ ಪಟೇಲ್ ಕಬಳಿಸಿದ್ದು ಕೇವಲ 6 ವಿಕೆಟ್ ಮಾತ್ರ. ಇನ್ನು ಆಲ್​ರೌಂಡರ್ ಮಿಚೆಲ್ ಮಾರ್ಷ್​ಗೆ ಸಿಕ್ಕಿದ್ದು ಕೇವಲ 4 ವಿಕೆಟ್​ಗಳು. ಅಂದರೆ ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ರಿಟೈನ್ ಆಗಿದ್ದ ಅನ್ರಿಕ್ ನೋಕಿಯಾ ಹಾಗೂ ಅಕ್ಷರ್ ಪಟೇಲ್ ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟ. ಇತ್ತ ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್ ಉತ್ತಮ ಬೌಲಿಂಗ್ ಮಾಡಿದ್ದರೂ ಉಳಿದ ಬೌಲರ್​ಗಳು ವಿಫಲರಾಗಿದ್ದರು. ಅತ್ತ ವಾರ್ನರ್ ಹೊರತುಪಡಿಸಿ ಬ್ಯಾಟ್ಸ್​ಮನ್​ಗಳು ಕೂಡ ಕೈಕೊಟ್ಟಿದ್ದು ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನದ ಮೇಲೆ ಪರಿಣಾಮ ಬೀರಿತು.

ಕೊನೆಯ ಎಡವಟ್ಟು: ಇದಾಗ್ಯೂ ಮುಂಬೈ ಇಂಡಿಯನ್ಸ್ ವಿರುದ್ದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರುವ ಅವಕಾಶವಿದ್ದರೂ, ಇಲ್ಲೂ ಕೂಡ ಬ್ಯಾಟ್ಸ್​ಮನ್​ಗಳೇ ಕೈಕೊಟ್ಟಿದ್ದರು. ಕೇವಲ 159 ರನ್​ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್​ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಕಟ್ಟಿಹಾಕುವ ಸೂಚನೆ ನೀಡಿತ್ತು. ಆದರೆ ರಿಷಭ್ ಪಂತ್ ಕೈಬಿಟ್ಟ ಕ್ಯಾಚ್, ತೆಗೆದುಕೊಂಡ ನಿರ್ಧಾರಗಳೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕೊನೆಯ ಅವಕಾಶಕ್ಕೆ ಮುಳುವಾಯಿತು. ಒಟ್ಟಾರೆ ಹೇಳುವುದಾದರೆ ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಕ್ಕಾಚಾರಗಳು ಆಟಗಾರರ ಅನುಪಸ್ಥಿತಿ, ಕೊರೋನಾತಂಕ, ಗಾಯದ ಸಮಸ್ಯೆ, ಬ್ಯಾಟಿಂಗ್ ವೈಫಲ್ಯದಿಂದ ತಲೆಕೆಳಗಾಗಿದೆ ಎನ್ನಬಹುದು.​

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:44 pm, Sun, 22 May 22