ಇಂಡಿಯನ್ ಪ್ರೀಯರ್ ಲೀಗ್ 15ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿವೆ. ಮುಂದಿನ ಶನಿವಾರ ಬಹುನಿರೀಕ್ಷಿತ ಐಪಿಎಲ್ 2022ಕ್ಕೆ (IPL 2022) ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಖಾಮುಖಿ ಆಗಲಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಐಪಿಎಲ್ನ ಎಲ್ಲ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಆರ್ಸಿಬಿ (RCB) ಸೇರಿದಂತೆ ಇತರೆ ತಂಡದ ಕೆಲ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದರೆ, ಇನ್ನೂ ಕೆಲವರು ಕ್ವಾರಂಟೈನ್ನಲ್ಲಿದ್ದಾರೆ. ಆದರೀಗ ಈ ಮಿಲಿಯನ್ ಡಾಲರ್ ಟೂರ್ನಿಯನ್ನು ಮೈದಾನಕ್ಕೆ ಬಂದು ವೀಕ್ಷಿಸಿ ರೋಚಕ ಅನುಭವ ಪಡೆದುಕೊಳ್ಳಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ. ಯಾಕೆಂದರೆ ಐಪಿಎಲ್ 2022 ಟೂರ್ನಿ ಪ್ರೇಕ್ಷಕರಿಲ್ಲದೆ ಈ ಬಾರಿ ಕೂಡ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ಹಿಂದೆ ಐಪಿಎಲ್ 2022 ವೀಕ್ಷಿಸಲು ಮೈದಾನದಕ್ಕೆ ಶೇ. 50 ರಷ್ಟು ಅಭಿಮಾನಿಗಳಿಗೆ ಅವಕಾಶ ಇದೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಮುಂದಿನ 7 ದಿನಗಳ ಒಳಗೆ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ ಹೆಚ್ಚಾಗಿದ್ದು ಎಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಏಷ್ಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೆಲವು ದಿನಗಳ ಹಿಂದೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಮುಂತಾದ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊವಿಡ್ ಪ್ರಕರಣಗಳ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಸಚಿನ ರಾಜೇಶ್ ತೋಪ್ ಮಾತನಾಡಿದ್ದು, “ಯುರೋಪಿಯನ್ ದೇಶಗಳು, ದಕ್ಷಿಣ ಕೊರಿಯಾ ಮತ್ತು ಚೀನಾದಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ನಾವು ಜಾಗರೂಕರಾಗಿರಲು ಕೇಂದ್ರ ಸರ್ಕಾರದಿಂದ ನಾವು ಪತ್ರವನ್ನು ಸ್ವೀಕರಿಸಿದ್ದೇವೆ”, ಎಂದು ಹೇಳಿದ್ದಾರೆ. ಹೀಗಾಗಿ ಹಿಂದಿನ ಕೊರೊನಾ ಅಲೆಗಳ ಸಮಯದಲ್ಲಿ ಹೆಚ್ಚು ಪೀಡಿತ ರಾಜ್ಯವಾಗಿದ್ದ ಮಹಾರಾಷ್ಟ್ರವು ಈಗಾಗಲೇ ಕೊವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಜನರನ್ನು ಒತ್ತಾಯಿಸುವ ಮೂಲಕ ಮಹಾರಾಷ್ಟ್ರದ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.
ಐಪಿಎಲ್ 2022 ಆರಂಭ ಆಗುವ ಹೊತ್ತಿಗೆ ಕೊರೊನಾ ಪ್ರಕರಣ ಕೊಂಚ ಏರಿಕೆಯಾದರು ಎಲ್ಲ ಪಂದ್ಯಗಳು ಮುಚ್ಚು ಕ್ರೀಡಾಂಗಣದಲ್ಲೇ ನಡೆಯಲಿದೆ. ಈ ಬಾರಿ ಆದರೂ ಸ್ಟೇಡಿಯಂಗೆ ತೆರಳಿ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಉಂಟಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಕೆಲ ದಿನಗಳ ವರೆಗೆ ಕಾದು ನಂತರ ಸ್ಥಿತಿಯನ್ನು ನೋಡಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಭಾರತವು ಮುಂದಿನ ಜೂನ್‌ನಲ್ಲಿ 4ನೇ ಕೊವಿಡ್ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಇತ್ತೀಚೆಗಷ್ಟೆ ಐಐಟಿ ಕಾನ್ಪುರ ತಂಡ ಹೇಳಿತ್ತು. ಜೂನ್ನಿಂದ ಮುಂದಿನ 4 ತಿಂಗಳವರೆಗೆ ಈ ಅಲೆ ಮುಂದುವರಿಯುತ್ತದೆ ಎಂದು ಹೇಳಿತ್ತು. ಜೂನ್ ಮಧ್ಯದಿಂದ ಅಂತ್ಯದ ವೇಳೆಗೆ ಭಾರತವು ನಾಲ್ಕನೇ ಹಂತದ ಕೊವಿಡ್ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಐಐಟಿ- ಕಾನ್ಪುರದ ತಜ್ಞರ ತಂಡವು ಇತ್ತೀಚೆಗೆ ನಡೆಸಿದ ಅಧ್ಯಯನ ತಿಳಿಸಿತ್ತು.
WI vs ENG: ಕೊನೆಯ ದಿನದಾಟ ಬಾಕಿ: ರೋಚಕ ಘಟ್ಟದತ್ತ ವಿಂಡೀಸ್-ಇಂಗ್ಲೆಂಡ್ ದ್ವಿತೀಯ ಟೆಸ್ಟ್
Published On - 8:26 am, Sun, 20 March 22