ಭಾನುವಾರ ಮುಂಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ (CSK vs GT) ತಂಡಗಳ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಇದಕ್ಕೇನು ಕಾರಣ ಎಂದು ನೋಡುವುದಾದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಅವರ ದುರ್ಮರಣ. ಕಾರು ಅಪಘಾತದಲ್ಲಿ ಮೃತಪಟ್ಟ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರ ಗೌರವಾರ್ಥವಾಗಿ ಸಿಎಸ್ಕೆ ಹಾಗೂ ಗುಜರಾತ್ ತಂಡದ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿದ್ದರು. ಸೈಮಂಡ್ಸ್ ಶನಿವಾರ ರಾತ್ರಿ ಕಾರು ಅಪಘಾತದಲ್ಲಿ 46 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈ ಹಿಂದೆ ಆಂಡ್ರ್ಯೂ ಸೈಮಂಡ್ಸ್ ಕೂಡ ಐಪಿಎಲ್ನಲ್ಲಿ ಆಡಿದ್ದರು. ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದ ಸೈಮಂಡ್ಸ್ ಆ ನಂತರ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ಸೈಮಂಡ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 53 ಎಸೆತಗಳಲ್ಲಿ 117 ರನ್ಗಳ ಅಜೇಯ ಶತಕ ಸಿಡಿಸಿ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆಲ್ಲುವಲ್ಲಿ ಕೂಡ ಸೈಮಂಡ್ಸ್ ಪ್ರಮುಖ ಪಾತ್ರವಹಿಸಿದ್ದರು.
ಆದರೆ ಶನಿವಾರ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಸ್ಥಿತಿ ತುಂಬಾ ಗಂಭೀರವಾಗಿದ್ದ ಕಾರಣ ವೈದ್ಯರು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಸೈಮಂಡ್ಸ್ 1998 ರಿಂದ 2009 ರವರೆಗೆ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಈ ಸಮಯದಲ್ಲಿ, ಸ್ಟೀವ್ ವಾ ಮತ್ತು ನಂತರ ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡ ಕ್ರಿಕೆಟ್ ಅಂಗಳದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆಯಿತು. ಈ ವೇಳೆ ಸೈಮಂಡ್ಸ್ ಆಸೀಸ್ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದರು ಎಂಬುದು ವಿಶೇಷ. ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್, 198 ODI ಮತ್ತು 14 T20I ಪಂದ್ಯಗಳನ್ನು ಆಡಿದ್ದಾರೆ. ಇದೀಗ ಕಾರು ಅಪಘಾತದಲ್ಲಿ ನಿಧನರಾಗಿರುವ ಆ್ಯಂಡ್ರ್ಯೂ ಸೈಮಂಡ್ಸ್ ಅವರ ಅಕಾಲಿಕ ಮರಣಕ್ಕೆ ವಿಶ್ವದ ಎಲ್ಲಾ ದಿಗ್ಗಜ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.