16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ಅನ್ನು ಎದುರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ನಿತೀಶ್ ರಾಣ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೃನಾಲ್ ಪಾಂಡ್ಯ ಅವರ ಲಖನೌ ಸೂಪರ್ ಜೇಂಟ್ಸ್ (KKR vs LSG) ಮುಖಾಮುಖಿ ಆಗಲಿದೆ. ಸಿಎಸ್ಕೆ ಇಂದಿನ ಮ್ಯಾಚ್ ಗೆದ್ದರೆ ಪ್ಲೇ ಆಫ್ಗೆ ಪ್ರವೇಶಿಸಿದ ದ್ವಿತೀಯ ತಂಡವಾಗಲಿದೆ. ಕೆಕೆಆರ್-ಲಖನೌ ಪ್ಲೇ ಆಫ್ ಭವಿಷ್ಯ ಕೂಡ ಇಂದು ನಿರ್ಧಾರವಾಗಲಿದೆ.
ಡೆಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಿತ್ತು. ಆದರೆ ಟೂರ್ನಿಯಿಂದ ಹೊರಬಿದ್ದಾಗಿದೆ. ಆರಂಭದಲ್ಲಿ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿರಲಿಲ್ಲ. ಆದರೆ, ಈಗ ವಾರ್ನರ್ ಕೂಡ ಬೇಗನೆ ಔಟಾಗುತ್ತಿದ್ದಾರೆ. ಪೃಥ್ವಿ ಶಾ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ರಿಲೀ ರುಸ್ಸೊ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಮಿಚೆಲ್ ಮಾರ್ಶ್ ನೆರವಾಗುತ್ತಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ನಲ್ಲಿ ಡೆಲ್ಲಿ ಮಾರಕವಾಗಿಲ್ಲ. ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕು.
IPL 2023: ಇನ್ನೊಂದೇ ಹೆಜ್ಜೆ ಬಾಕಿ; 2023ರ ಐಪಿಎಲ್ನಲ್ಲಿ ಸೃಷ್ಟಿಯಾಗಲಿದೆ ಅಪರೂಪದ ದಾಖಲೆ..!
ಸಿಎಸ್ಕೆ ತಂಡ ಮೇಲ್ನೋಟಕ್ಕೆ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೆ, ಕಳೆದ ಕೆಲವು ಪಂದ್ಯಗಳಿಂದ ರುತುರಾಯ್ ಗಾಯಕ್ವಾಡ್, ಡೆವೋನ್ ಕಾನ್ವೆ ಉತ್ತಮ ಆರಂಭ ಒದಗಿಸುತ್ತಿಲ್ಲ. ಅಜಿಂಕ್ಯಾ ರಹಾನೆ ಕೂಡ ಬೇಗನೆ ಔಟ್ ಆಗುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಆರಂಭದಲ್ಲಿ ಮಂಕಾಗಿದ್ದ ಸಿಎಸ್ಕೆ ಬೌಲಿಂಗ್ ಈಗ ಬಲಿಷ್ಠವಾಗಿದೆ. ಮತೀಶಾ ಪತಿರಾನ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ದೀಪಕ್ ಚಹರ್, ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.
ಕೆಕೆಆರ್ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 6 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಕೋಲ್ಕತ್ತಾ ತಂಡ ಟೂರ್ನಿಯ ಆರಂಭಕ್ಕಿಂತ ಈಗ ಸಾಕಷ್ಟು ಬೆಳವಣಿಗೆ ಕಂಡಿದೆ. ಜೇಸನ್ ರಾಯ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಜೋಡಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ನಾಯಕ ನಿತೀಶ್ ರಾಣ ಹಾಗೂ ರಿಂಕು ಸಿಂಗ್ ಪ್ರತಿ ಪಂದ್ಯದಲ್ಲಿ ರನ್ ಕಲೆಹಾಕುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಕಡೆಯಿಂದ ಒಂದೊಳ್ಳೆ ಆಟ ಬರಬೇಕು. ಆಂಡ್ರೆ ರಸೆಲ್, ಶಾರ್ದೂಲ್ ಥಾಕೂರ್ ಕೂಡ ಅಬ್ಬರಿಸಿದರೆ ತಂಡದ ಮೊತ್ತ ಮತ್ತೊಮ್ಮೆ 200+ ಆಗುವುದು ಖಚಿತ. ಸುನಿಲ್ ನರೈನ್, ವರುಣ್ ಚಕ್ರವರ್ತಿ ಮಾರಕವಾಗಿದ್ದರೆ ಹರ್ಷಿತ್ ರಾಣ, ಸುಯೇಶ್ ಶರ್ಮಾ ಭರವಸೆ ಮೂಡಿಸಿದ್ದಾರೆ.
ಇತ್ತ ಲಖನೌ ತಂಡ ಕೂಡ ಅತ್ಯಂತ ಬಲಿಷ್ಠವಾಗಿದೆ. ತಂಡದ ನಾಯಕ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿರುವುದು ಬೇಸರದ ಸಂಗತಿ. ಎಲ್ಎಸ್ಜಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಖೈಲ್ ಮೇಯರ್ಸ್ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಆಯುಷ್ ಬದೋನಿ, ಮಾರ್ಕಸ್ ಸ್ಟಾಯಿನಿಸ್ ಹಾಗೂ ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಬಲವಾಗಿದ್ದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ. ಕ್ವಿಂಟನ್ ಡಿಕಾಕ್ ಕೂಡ ತಂಡದಲ್ಲಿದ್ದಾರೆ. ದೀಪಕ್ ಹೂಡ ಕಡೆಯಿಂದ ಇನ್ನಷ್ಟು ಉತ್ತಮ ಆಟ ಬರಬೇಕಿದೆ. ನಾಯಕ ಕ್ರುನಾಲ್ ಪಾಂಡ್ಯ ಕೂಡ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ. ಬೌಲಿಂಗ್ನಲ್ಲಿ ನವೀನ್ ಉಲ್ ಹಖ್, ಆವೇಶ್ ಖಾನ್, ರವಿ ಬಿಷ್ಟೋಯಿ ಹಾಗೂ ಅಮಿತ್ ಮಿಶ್ರಾ ಉತ್ತಮ ಫಾರ್ಮ್ನಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ