IPL 2023: 6,6,6; 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೌಲರ್​ ಸದ್ದಡಗಿಸಿದ ಗಿಲ್..!

|

Updated on: May 27, 2023 | 12:15 AM

IPL 2023: ಇನ್ನು ಈ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ಗಿಲ್, ಐಪಿಎಲ್ ಪ್ಲೇಆಫ್‌ ಪಂದ್ಯದಲ್ಲಿ ಶತಕ ಸಿಡಿಸಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

IPL 2023: 6,6,6; 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೌಲರ್​ ಸದ್ದಡಗಿಸಿದ ಗಿಲ್..!
ಮುಂಬೈ ತಂಡ
Follow us on

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2 ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್​ಗಳ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್‌ (Gujarat Titans vs Mumbai Indians) ಸತತ ಎರಡನೇ ಬಾರಿ ಫೈನಲ್​ಗೇರಿದೆ.  ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ರೋಹಿತ್ ನಿರ್ಧಾರವನ್ನು ತಪ್ಪೆಂದು ಸಾಭೀತುಪಡಿಸಿದ ಗುಜರಾತ್ ಆರಂಭಿಕ ಶುಭ್​ಮನ್  ಗಿಲ್ (Shubman Gill) ತಮ್ಮ ಮೂರನೇ ಐಪಿಎಲ್ ಶತಕವನ್ನು ಸಿಡಿಸಿದಲ್ಲದೆ ಮುಂಬೈ ಬೌಲರ್​ಗಳನ್ನು ಇನ್ನಿಲ್ಲದಂತೆ ಕಾಡಿದರು. ಕೇವಲ 60 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 129 ರನ್ ಚಚ್ಚಿದ ಗಿಲ್, ಕಳೆದ ಮುಖಾಮುಖಿಯಲ್ಲಿ ತನ್ನ ವಿಕೆಟ್ ಉರುಳಿಸಿದ್ದ ಆಕಾಶ ಮಧ್ವಲ್ ( Akash Madhwal) ವಿರುದ್ಧ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ ಬಾರಿಸಿ ಸರಿಯಾಗಿ ರಿವೇಂಜ್ ತೆಗೆದುಕೊಂಡಿದ್ದಾರೆ.

ಗುಜರಾತ್ ಇನ್ನಿಂಗ್ಸ್‌ನ 12ನೇ ಓವರ್‌ ಬೌಲ್ ಮಾಡಲು ಬಂದ ಆಕಾಶ್ ಅವರ ಮೊದಲ ಎಸೆತವನ್ನು ಬ್ಯಾಕ್‌ವರ್ಡ್‌ ಸ್ಕ್ವೇರ್‌ ಲೆಗ್‌ನಲ್ಲಿ ಅದ್ಭುತ ಸಿಕ್ಸರ್‌ ಬಾರಿಸಿದ ಗಿಲ್, ನಂತರದ ಎಸೆತವನ್ನು ಮಿಡ್-ವಿಕೆಟ್ ಮೇಲೆ ಸಿಕ್ಸರ್​ಗಟ್ಟಿದರು. ಆ ಬಳಿಕ ಓವರ್‌ನ ಐದನೇ ಎಸೆತವನ್ನು ಸ್ಕ್ವೇರ್-ಲೆಗ್ ಫೀಲ್ಡರ್‌ನ ತಲೆಯ ಮೇಲೆ ಸಿಕ್ಸರ್‌ಗಟ್ಟಿದರು. ಈ ಮೂಲಕ ಕಳೆದ ಮುಖಾಮುಖಿಯಲ್ಲಿ ತನ್ನ ವಿಕೆಟ್ ಉರುಳಿಸಿದ್ದ ಆಕಾಶ್ ವಿರುದ್ಧ ಗಿಲ್ ಸರಿಯಾಗಿಯೇ ಸೇಡು ತೀರಿಸಿಕೊಂಡರು.

IPL 2023: ಕೊಹ್ಲಿ ಹಾದಿಯಲ್ಲಿ ಶುಭ್​ಮನ್; 60 ಎಸೆತಗಳಲ್ಲಿ 129 ರನ್ ಚಚ್ಚಿದ ಗಿಲ್ ಬರೆದ ದಾಖಲೆಗಳಿವು

ಕಳೆದ ಪಂದ್ಯದಲ್ಲಿ ಹೀರೋ, ಈ ಪಂದ್ಯದಲ್ಲಿ ಜೀರೋ

ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ಲಕ್ನೋ ವಿರುದ್ಧ ಎಲಿಮಿನೆಟರ್ ಪಂದ್ಯವನ್ನಾಡಿದ್ದ ಮುಂಬೈಗೆ ಗೆಲುವಿನ ಉಡುಗೊರೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಕಾಶ್, ಈ ಪಂದ್ಯದಲ್ಲಿ ತೀರ ದುಬಾರಿ ಎನಿಸಿಕೊಂಡರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆಕಾಶ್ 3.3 ಓವರ್​ಗಳಲ್ಲಿ ಐದು ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಬೌಲರ್‌ ಒಬ್ಬ ನೀಡಿದ್ದ ಅತ್ಯುತ್ತಮ ಪ್ರದರ್ಶನವಾಗಿತ್ತು. ಆದರೆ ಈ ಪಂದ್ಯದಲ್ಲಿ ಆ ಪ್ರದರ್ಶನ ನೀಡುವಲ್ಲಿ ಆಕಾಶ್ ವಿಫಲರಾದರು.

ಜೀವದಾನ ನೀಡಿದ ಟಿಮ್ ಡೇವಿಡ್

ಈ ಪಂದ್ಯದಲ್ಲಿ ಬರೋಬ್ಬರಿ 51 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡ ಮಧ್ವಲ್, ಅಂತಿಮವಾಗಿ ಗಿಲ್ ವಿಕೆಟ್ ಪಡೆದರು. 17ನೇ ಓವರ್‌ನ ಐದನೇ ಎಸೆತದಲ್ಲಿ ಗಿಲ್, ಟಿಮ್ ಡೇವಿಡ್ ಕೈಗೆ ಕ್ಯಾಚಿತ್ತು ಔಟಾದರು. ಆದರೆ ಇದೇ ಡೇವಿಡ್, ಗಿಲ್ 30 ರನ್‌ಗಳಿಸಿ ಆಡುತ್ತಿರುವ ವೇಳೆ ಕ್ಯಾಚ್ ಕೈಚೆಲ್ಲಿ ಗಿಲ್​​ಗೆ ಜೀವದಾನ ನೀಡಿದ್ದರು.

ದಾಖಲೆ ಬರೆದ ಗಿಲ್

ಇನ್ನು ಈ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ಗಿಲ್, ಐಪಿಎಲ್ ಪ್ಲೇಆಫ್‌ ಪಂದ್ಯದಲ್ಲಿ ಶತಕ ಸಿಡಿಸಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ 23 ವರ್ಷ ಮತ್ತು 260 ದಿನಗಳಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ  ಗಿಲ್ ಸಿಡಿಸಿದ ಶತಕ, ವೃದ್ಧಿಮಾನ್ ಸಹಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದಾರ್ (49 ಎಸೆತಗಳು) ಜೊತೆಗೆ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಸಿಡಿಸಿದ ಮೂರನೇ ಜಂಟಿ-ವೇಗದ ಶತಕವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:09 am, Sat, 27 May 23