IPL 2024: ಮಕ್ಕಳ ಫೀಸ್ ಕಟ್ಟದೆ ಧೋನಿ ನೋಡಲು 64 ಸಾವಿರ ಖರ್ಚು ಮಾಡಿದ ಅಭಿಮಾನಿ! ವಿಡಿಯೋ ವೈರಲ್

|

Updated on: Apr 14, 2024 | 4:17 PM

IPL 2024: ಇಲ್ಲೊಬ್ಬ ಅಭಿಮಾನಿ ಧೋನಿಯನ್ನು ನೋಡುವ ಸಲುವಾಗಿ ತನ್ನ ಮಗಳ ಫೀಸ್ ಕಟ್ಟುವ ಬದಲು ಅದೇ ಹಣದಲ್ಲಿ ಟಿಕೆಟ್ ಖರೀದಿಸಿ ಮಕ್ಕಳೊಂದಿಗೆ ಐಪಿಎಲ್ ಮ್ಯಾಚ್ ನೋಡಿದ್ದಾನೆ. ಈ ವಿಚಾರವನ್ನು ಸ್ವತಃ ಆ ಅಭಿಮಾನಿಯೇ ಹೇಳಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

IPL 2024: ಮಕ್ಕಳ ಫೀಸ್ ಕಟ್ಟದೆ ಧೋನಿ ನೋಡಲು 64 ಸಾವಿರ ಖರ್ಚು ಮಾಡಿದ ಅಭಿಮಾನಿ! ವಿಡಿಯೋ ವೈರಲ್
ಎಂಎಸ್ ಧೋನಿ
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ ಸರಳ ವ್ಯಕ್ತಿತ್ವದಿಂದಲೇ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದವರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು (Team India) ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಕ್ಯಾಪ್ಟನ್ ಕೂಲ್​ಗೆ ಕ್ರಿಕೆಟ್​ ಲೋಕದಲ್ಲಿ ಬೇರೆಯದ್ದೇ ಸ್ಥಾನಮಾನಗಳಿವೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ವರ್ಷಗಳೆ ಕಳೆದಿವೆ. ಪ್ರಸ್ತುತ ಐಪಿಎಲ್​ನಲ್ಲಿ (IPL 2024) ಆಡುತ್ತಿರುವ ಧೋನಿಗೆ ಇದು ಕೊನೆಯ ಸೀಸನ್ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಧೋನಿ, ಈ ಸೀಸನ್ ಆರಂಭಕ್ಕೂ ಮುನ್ನ ಸಿಎಸ್​ಕೆ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದು ಧೋನಿಯ ವಿದಾಯದ ಸೀಸನ್ ಎಂಬುದಕ್ಕೆ ಪುಷ್ಠಿ ನೀಡಿತ್ತು. ಹೀಗಾಗಿ ಧೋನಿ ಆಟವನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳುವ ಸಲುವಾಗಿ ಲಕ್ಷಾಂತರ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಮೈದಾನಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಧೋನಿಯನ್ನು ನೋಡುವ ಸಲುವಾಗಿ ತನ್ನ ಮಗಳ ಫೀಸ್ ಕಟ್ಟುವ ಬದಲು ಅದೇ ಹಣದಲ್ಲಿ ಟಿಕೆಟ್ ಖರೀದಿಸಿ ಮಕ್ಕಳೊಂದಿಗೆ ಐಪಿಎಲ್ ಮ್ಯಾಚ್ ನೋಡಿದ್ದಾನೆ. ಈ ವಿಚಾರವನ್ನು ಸ್ವತಃ ಆ ಅಭಿಮಾನಿಯೇ ಹೇಳಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ವೈರಲ್

ವಾಸ್ತವವಾಗಿ ಕಳೆದ ಏಪ್ರಿಲ್ 8 ರಂದು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಧೋನಿ ಆಟ ನೋಡಲು ಇಡೀ ಕ್ರೀಡಾಂಗಣವೇ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. ಆದರೆ ಈ ಅಭಿಮಾನಿಗಳ ನಡುವೆ ಧೋನಿಯ ಅಭಿಮಾನಿಯೊಬ್ಬ ತನ್ನ ನಿರ್ಧಾರದಿಂದಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಪ್ರಸ್ತುತ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಪೋರ್ಟ್ಸ್‌ವಾಕ್ ಚಾನೆಲ್‌ ವ್ಯಕ್ತಿಯೊಬ್ಬರ ಸಂದರ್ಶನ ಮಾಡಿದ್ದು, ಆ ವ್ಯಕ್ತಿ ತನ್ನ ಮಕ್ಕಳೊಂದಿಗೆ ಪಂದ್ಯ ನೋಡಲು ಬಂದಿರುವುದಾಗಿ ತಿಳಿಸಿದ್ದಾರೆ.

64000 ರೂಪಾಯಿ ನೀಡಿ ಟಿಕೆಟ್ ಖರೀದಿ

ಮುಂದುವರೆದು ಮಾತನಾಡಿರುವ ಆ ಅಭಿಮಾನಿ, ನನಗೆ ಪಂದ್ಯದ ಟಿಕೆಟ್ ಸಿಗಲಿಲ್ಲ. ಹೀಗಾಗಿ ನಾನು 64 ಸಾವಿರ ರೂಪಾಯಿ ನೀಡಿ ಬ್ಲಾಕ್​ನಲ್ಲಿ ಟಿಕೆಟ್ ಖರೀದಿಸಿದೆ. ಧೋನಿಯನ್ನು ಲೈವ್ ಆಗಿ ನೋಡುವ ಸಲುವಾಗಿ ನಾನು ಎಷ್ಟೇ ದುಡ್ಡಾದರು ಲೆಕ್ಕಿಸದೆ ಟಿಕೆಟ್ ಖರೀದಿಸಿ ನನ್ನ ಮಕ್ಕಳೊಂದಿಗೆ ಮ್ಯಾಚ್ ನೋಡಿದೆ. ವಾಸ್ತವವಾಗಿ ನಾನು ನನ್ನ ಮಗಳ ಫೀಸ್ ಕಟ್ಟಿಲ್ಲ. ಆದರೂ ಧೋನಿಯನ್ನು ನೋಡಲು 64000 ನೀಡಿ ಟಿಕೆಟ್ ಖರೀದಿಸಿದೆ. ಧೋನಿಯನ್ನು ನೋಡಿದ ಬಳಿಕ ನನ್ನ ಮಕ್ಕಳು ಸಂತಸ ಪಟ್ಟಿದ್ದಾರೆ ಎಂದು ಆ ಅಭಿಮಾನಿ ಹೇಳಿದ್ದಾನೆ.

ಜನ ಪ್ರತಿಕ್ರಿಯಿಸಿದ್ದು ಹೀಗೆ

ಮಕ್ಕಳ ಫೀಸ್ ಕಟ್ಟದೆ ಧೋನಿಯನ್ನು ನೋಡಲು ಅಷ್ಟೊಂದು ಹಣ ಖರ್ಚು ಮಾಡಿದ ಈ ವ್ಯಕ್ತಿಯ ಅಂಧಾಭಿಮಾನಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನವರು ಈ ನಿರ್ಧಾರವನ್ನು ಟೀಕಿಸಿದರೆ, ಇನ್ನು ಕೆಲವರು ಇದನ್ನು ಹುಚ್ಚುತನ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Sun, 14 April 24