ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ ಎಲಿಮಿನೇಟರ್ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಐಪಿಎಲ್ ಕೆರಿಯರ್ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಹೊರಗುಳಿಯುವುದು ಕೂಡ ಖಚಿತವಾಗಿದೆ. 38 ವರ್ಷದ ಡಿಕೆ ಇನ್ನೂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿಲ್ಲ. ಇದಾಗ್ಯೂ 2022 ರಿಂದ ಅವರು ಭಾರತ ತಂಡವನ್ನು ಪ್ರತಿನಿಧಿಸಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಅವರಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗುವುದಿಲ್ಲ ಎಂದೇ ಹೇಳಬಹುದು.
ಮತ್ತೊಂದೆಡೆ ದೇಶೀಯ ಅಂಗಳದಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಡಿಕೆ ಇನ್ಮುಂದೆ ಆ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ. ಏಕೆಂದರೆ ಐಪಿಎಲ್ನಲ್ಲಿ ಕೆರಿಯರ್ ಮುಗಿಸಿರುವ ಕಾರಣ ದಿನೇಶ್ ಕಾರ್ತಿಕ್ ಮತ್ತೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ.
ಈ ಹಿಂದೆಯೇ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಸಂಪೂರ್ಣವಾಗಿ ಕ್ರಿಕೆಟ್ನಿಂದ ಹೊರಗುಳಿದಿರುವ ಕಾರಣ ಅವರು ಮುಂಬರುವ ದಿನಗಳಲ್ಲಿ ಸ್ಟಾರ್ ಸ್ಪೋರ್ಟ್ಸ್ ಜೊತೆ ಕೈ ಜೋಡಿಸುವ ಸಾಧ್ಯತೆಯಿದೆ. ಏಕೆಂದರೆ ಜೂನ್ 2 ರಿಂದ ಟಿ20 ವಿಶ್ವಕಪ್ ಶುರುವಾಗಲಿದ್ದು, ಈ ವೇಳೆ ಅವರು ಕಾಮೆಂಟರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳಬಹುದು.
ಹಾಗೆಯೇ ಈ ಹಿಂದೆ ಸ್ಕೈ ಸ್ಪೋರ್ಟ್ಸ್ ಜೊತೆಗೂ ಕಾರ್ಯ ನಿರ್ವಹಿಸಿರುವ ಕಾರಣ ವಿದೇಶಿ ಚಾನೆಲ್ಗಳಲ್ಲೂ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಬಹುದು. ಅಂದರೆ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಕಾಮೆಂಟೇಟರ್ ಆಗಿ ಗಮನ ಸೆಳೆದಿರುವ ದಿನೇಶ್ ಕಾರ್ತಿಕ್ ಮುಂಬರುವ ದಿನಗಳಲ್ಲಿ ಅದೇ ವೃತ್ತಿಯನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಐಸಿಸಿ ಟೂರ್ನಿಗಳಲ್ಲಿ ಮತ್ತು ಇತರೆ ಸರಣಿಗಳಲ್ಲಿ ಡಿಕೆ ಕಾಮೆಂಟೇಟರ್ ಆಗಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ: IPL 2024: ಬೆಂಗಳೂರಿಗೆ ಸಾಧ್ಯವಿಲ್ಲ… RCB ತಂಡದ ಸೋಲನ್ನು ಸಂಭ್ರಮಿಸಿದ CSK ಬೌಲರ್..!