ಐಪಿಎಲ್ (IPL 2024) 17ನೇ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದೆ. ಇಡೀ ಟೂರ್ನಿಯ ವೇಳಾಪಟ್ಟಿ ಇನ್ನೂ ಬಹಿರಂಗವಾಗಿಲ್ಲವಾದರೂ ಲೋಕಸಭಾ ಚುನಾವಣೆಯ ಕಾರಣ ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗಿನ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ನಾಲ್ಕು ಪಂದ್ಯಗಳನ್ನು ಆಡಲಿದೆ. ಮುಂಬೈ ತನ್ನ ಮೊದಲ ಎರಡು ಪಂದ್ಯಗಳನ್ನು ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಆಡಲಿದೆ. ಉಳಿದೆರಡು ಪಂದ್ಯಗಳನ್ನು ಮುಂಬೈ ತನ್ನ ತವರು ಮೈದಾನವಾದ ವಾಂಖೆಡೆಯಲ್ಲಿ ಆಡಲಿದೆ. ಹೀಗಿರುವಾಗ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ವಿಶೇಷ ಅಪ್‌ಡೇಟ್ ಹೊರಬಿದ್ದಿದೆ. ಫ್ರಾಂಚೈಸ್ ತನ್ನ ಪಂದ್ಯಗಳಿಗೆ ಟಿಕೆಟ್‌ಗಳ ಮಾರಾಟದ ಬಗ್ಗೆ ಶುಕ್ರವಾರ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮಾರ್ಚ್ 24 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಮತ್ತು ಮುಂದಿನ ಮೂರು ಪಂದ್ಯಗಳ ಟಿಕೆಟ್‌ಗಳನ್ನು ನಾಲ್ಕು ಹಂತಗಳಲ್ಲಿ ಮಾರಾಟ ಮಾಡಲಾಗುತ್ತದೆ. ಫ್ರಾಂಚೈಸ್ ಈ ನಾಲ್ಕು ಹಂತಗಳ ಟಿಕೆಟ್ ಮಾರಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಮೊದಲ ಹಂತದ ಟಿಕೆಟ್ ಮಾರಾಟ ಮಾರ್ಚ್ 6 ರಿಂದ ಪ್ರಾರಂಭವಾಗಲಿದ್ದು, ಈ ಹಂತದ ಟಿಕೆಟ್‌ಗಳನ್ನು SLICE UPI ಮೂಲಕ ಮಾತ್ರ ಖರೀದಿಸಬೇಕಾಗಿರುತ್ತದೆ.
ನಂತರ 2ನೇ ಹಂತದ ಟಿಕೆಟ್‌ಗಳ ಮಾರಾಟ ಮಾರ್ಚ್ 9 ರಿಂದ ಪ್ರಾರಂಭವಾಗಲಿದ್ದು, ಮೂರನೇ ಹಂತದಲ್ಲಿ, ಮಾರ್ಚ್ 10 ರಿಂದ ಟಿಕೆಟ್ ಬುಕಿಂಗ್ ಪ್ರಾರಂಭವಾಗುತ್ತದೆ. ಇದರ ನಂತರ, ನಾಲ್ಕನೇ ಹಂತವು ಮಾರ್ಚ್ 13 ರಿಂದ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಎಲ್ಲರಿಗೂ ಟಿಕೆಟ್ ಬುಕಿಂಗ್ ಮಾಡುವ ಅವಕಾಶ ಸಿಗಲಿದೆ.
ಮುಂಬೈ ಇಂಡಿಯನ್ಸ್ ಈ ಪೋಸ್ಟ್‌ನಲ್ಲಿ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಈ ಲಿಂಕ್ ಮೂಲಕ, ಅಭಿಮಾನಿಗಳು ನೀಲಿ, ಚಿನ್ನ, ಬೆಳ್ಳಿ ಅಥವಾ ಇತರ ಹಲವು ರೀತಿಯ ಸದಸ್ಯತ್ವವನ್ನು ಪಡೆಯಬಹುದು. ಇದರ ನಂತರ ಟಿಕೆಟ್ ಪಡೆಯುವುದು ಸುಲಭವಾಗಲಿದೆ. ಟಿಕೆಟ್‌ಗಳನ್ನು ಖರೀದಿಸುವ ಕುರಿತು ಇತರ ಮಾಹಿತಿಗಾಗಿ, ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಮಾರ್ಚ್ 24 (ರಾತ್ರಿ 7.30): ಗುಜರಾತ್ ಟೈಟಾನ್ಸ್, ಅಹಮದಾಬಾದ್.
ಮಾರ್ಚ್ 27 (ರಾತ್ರಿ 7.30): ಸನ್ ರೈಸರ್ಸ್ ಹೈದರಾಬಾದ್, ಹೈದರಾಬಾದ್.
ಏಪ್ರಿಲ್ 1 (ರಾತ್ರಿ 7.30): ರಾಜಸ್ಥಾನ ರಾಯಲ್ಸ್, ಮುಂಬೈ.
ಏಪ್ರಿಲ್ 7 (ಮಧ್ಯಾಹ್ನ 3.30): ದೆಹಲಿ ಕ್ಯಾಪಿಟಲ್ಸ್, ಮುಂಬೈ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Fri, 1 March 24