ಬಿಸಿಸಿಐ ನಿಯಮದಂತೆ ಎಲ್ಲಾ 10 ಫ್ರಾಂಚೈಸಿಗಳು ಗಡುವು ಮುಗಿಯುವ ವೇಳೆಗೆ ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಅಚ್ಚರಿಯ ನಿರ್ಧಾರಗಳನ್ನು ಕೈಗೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ನಾವೆಲ್ಲ ನಿರೀಕ್ಷಿಸಿದ್ದ ಆಟಗಾರನ್ನೇ ತಂಡದಲ್ಲಿ ಉಳಿಸಿಕೊಂಡಿದ್ದವು. ಇನ್ನು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಫ್ರಾಂಚೈಸಿಗಳ ಪೈಕಿ, ಮೂರು ಫ್ರಾಂಚೈಸಿಗಳು ತಮ್ಮ ತಂಡದ ನಾಯಕನನ್ನೇ ಕೈಬಿಟ್ಟಿದ್ದವು. ಈ ಮೂರು ಫ್ರಾಂಚೈಸಿಗಳಲ್ಲಿ ಕಳೆದ ಬಾರಿಯ ಚಾಂಪಿಯನ್ ಕೆಕೆಆರ್ ಕೂಡ ಸೇರಿದೆ. ವಾಸ್ತವವಾಗಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದ ಕೆಕೆಆರ್, ಅವರನ್ನೇ ತಂಡದಿಂದ ಕೈಬಿಟ್ಟಿದೆ. ಅಸಲಿಗೆ ಆರಂಭದಲ್ಲಿ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಏಕೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೀಗ ಆ ಬಗ್ಗೆ ತಂಡದ ಸಿಇಒ ವೆಂಕಿ ಮೈಸೂರು ಸ್ಪಷ್ಟನೆ ನೀಡಿದ್ದಾರೆ.
ವಾಸ್ತವವಾಗಿ ಶ್ರೇಯಸ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡದ 10 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸಿದ್ದರು. ಆದರೆ ಶ್ರೇಯಸ್ ಹೊರತುಪಡಿಸಿ, ಫ್ರಾಂಚೈಸ್ ಧಾರಣ ಪಟ್ಟಿಯಲ್ಲಿ ಇತರ ಆರು ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ಚಾಂಪಿಯನ್ ನಾಯಕನನ್ನು ಕೈಬಿಟ್ಟಿದ್ದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಅದರಲ್ಲಿ ಒಂದು, ಶ್ರೇಯಸ್ ಅಯ್ಯರ್, ಕೆಕೆಆರ್ ಬಳಿ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದು, ಅಯ್ಯರ್ ಅವರ ಬೇಡಿಕೆಯಷ್ಟು ನೀಡಲು ಸಾಧ್ಯವಾಗದ ಕಾರಣ ಅವರನ್ನು ಫ್ರಾಂಚೈಸಿ ತಂಡದಿಂದ ಕೈಬಿಟ್ಟಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಊಹಾಪೋಹಕ್ಕೆ ಸರಿ ಹೊಂದುವಂತೆ ವೆಂಕಿ ಮೈಸೂರು ಕೂಡ ಅದೇ ರೀತಿಯ ಕಾರಣ ನೀಡಿದ್ದಾರೆ.
ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವೆಂಕಿ ಮೈಸೂರು, ‘ನಮ್ಮ ಧಾರಣ ಪಟ್ಟಿಯ ಮೊದಲ ಆಯ್ಕೆಯಾಗಿ ಶ್ರೇಯಸ್ ಅಯ್ಯರ್ ಹೆಸರಿತ್ತು. ಅವರು ನಮ್ಮ ತಂಡದ ನಾಯಕ ಮತ್ತು ನಾವು ನಾಯಕನ ಸುತ್ತ ಇಡೀ ತಂಡವನ್ನು ಕಟ್ಟಬೇಕು. ಅವರು ಉತ್ತಮ ನಾಯಕನಾಗಿರುವ ಕಾರಣದಿಂದಲೇ ನಾವು ಅವರನ್ನು 2022 ರಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದೇವು. ಇನ್ನು ಧಾರಣ ಪ್ರಕ್ರಿಯೆಗೆ ಪರಸ್ಪರ ಒಪ್ಪಿಗೆ ಅಗತ್ಯವಿದ್ದು, ಶ್ರೇಯಸ್ ಅಯ್ಯರ್ ಕಡೆಯಿಂದ ಆ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಫ್ರಾಂಚೈಸ್ನಿಂದಲೂ ಏನನ್ನು ಮಾಡಲು ಸಾಧ್ಯವಾಗಲಿಲ್ಲ.
We hope people won’t say anymore Shreyas Iyer didn’t get the respect he deserves. KKR gave him first retention but he didn’t accept. Hear what Venky Mysore is saying 👍🏻pic.twitter.com/11PW0a0pCY
— KKR Vibe (@KnightsVibe) November 1, 2024
ಈ ಒಪ್ಪಂದದ ನಡುವೆ ಹಣದಂತಹ ಕೆಲವು ಅಂಶಗಳು ಬಂದಾಗ ಮತ್ತು ಯಾರಾದರೂ ಒಬ್ಬ ಆಟಗಾರ ತನ್ನ ಮಾರುಕಟ್ಟೆ ಮೌಲ್ಯವನ್ನು ಪರೀಕ್ಷಿಸಲು ಬಯಸಿದಾಗ ನಮ್ಮಿಂದ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಯ್ಯರ್ ಕೂಡ ಹರಾಜಿನಲ್ಲಿ ತನ್ನ ಮೌಲ್ಯವನ್ನು ನೋಡಲು ಬಯಸಿದರು ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ ಶ್ರೇಯಸ್ ಹಾಗೂ ನಮ್ಮ ನಡುವಿನ ಸಂಬಂಧ ಉತ್ತಮವಾಗಿದೆ. ಒಬ್ಬ ಆಟಗಾರ ಹರಾಜಿನಲ್ಲಿ ತನ್ನ ಮೌಲ್ಯವನ್ನು ಪರೀಕ್ಷಿಸುವ ನಿರ್ಧಾರವನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ ಎಂದು ವೆಂಕಿ ಮೈಸೂರು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ