
ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ಆಟಗಾರರ ಸುರಕ್ಷತೆ ಮತ್ತು ಪಂದ್ಯದ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಹೆಜ್ಜೆ ಇರಿಸಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬಂದ ಕೆಲವು ಅಶಿಸ್ತಿನ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಎಲ್ಲಾ 10 ಫ್ರಾಂಚೈಸಿಗಳಿಗೆ 7 ಪುಟಗಳ ವಿಸ್ತೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹನಿ ಟ್ರ್ಯಾಪ್ ಬಗ್ಗೆ ಎಚ್ಚರಿಕೆ: ಆಟಗಾರರು ಮತ್ತು ಸಿಬ್ಬಂದಿಗಳು ‘ಹನಿ ಟ್ರ್ಯಾಪ್’ ಜಾಲಕ್ಕೆ ಬೀಳದಂತೆ ಬಿಸಿಸಿಐ ಎಚ್ಚರಿಸಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹೊರಗಡೆ ವ್ಯವಹರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.
ಹೋಟೆಲ್ ಕೊಠಡಿಗಳಿಗೆ ನಿರ್ಬಂಧ: ತಂಡದ ವ್ಯವಸ್ಥಾಪಕರ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿಗಳು ಆಟಗಾರರ ಅಥವಾ ಕೋಚಿಂಗ್ ಸಿಬ್ಬಂದಿಯ ಹೋಟೆಲ್ ಕೊಠಡಿಗಳಿಗೆ ಪ್ರವೇಶಿಸುವಂತಿಲ್ಲ. ಭೇಟಿಗಾಗಿ ಹೋಟೆಲ್‌ನ ಸಾರ್ವಜನಿಕ ಸ್ಥಳಗಳನ್ನು ಮಾತ್ರ ಬಳಸಲು ಸೂಚಿಸಲಾಗಿದೆ.
ಸಂಚಾರಕ್ಕೆ ಅನುಮತಿ ಕಡ್ಡಾಯ: ಆಟಗಾರರು ಅಥವಾ ಸಿಬ್ಬಂದಿ ಹೋಟೆಲ್ ಆವರಣದಿಂದ ಹೊರಗೆ ಹೋಗಬೇಕಾದಲ್ಲಿ, ನಿಯೋಜಿತ ಭದ್ರತಾ ಸಂಪರ್ಕ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವುದು ಕಡ್ಡಾಯ.
ಮಾನ್ಯತಾ ಕಾರ್ಡ್‌ಗಳ ಬಳಕೆ: ಸ್ಟೇಡಿಯಂ, ಹೋಟೆಲ್ ಮತ್ತು ಅಭ್ಯಾಸದ ಅವಧಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ತಮ್ಮ ಮಾನ್ಯತಾ ಕಾರ್ಡ್‌ಗಳನ್ನು (Accreditation Cards) ಧರಿಸಿರಬೇಕು. ಇದು ಭದ್ರತಾ ತಪಾಸಣೆಯನ್ನು ಸುಗಮಗೊಳಿಸಲು ಸಹಕಾರಿ.
ಮಾಲೀಕರಿಗೆ ಡಗೌಟ್ ನಿರ್ಬಂಧ: ಪಂದ್ಯ ನಡೆಯುತ್ತಿರುವ ಸಮಯದಲ್ಲಿ ತಂಡದ ಮಾಲೀಕರು ಡಗೌಟ್‌ನಲ್ಲಿರುವ ಆಟಗಾರರು ಅಥವಾ ಮ್ಯಾನೇಜರ್‌ಗಳೊಂದಿಗೆ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಂದ್ಯದ ಮೇಲೆ ಯಾವುದೇ ಬಾಹ್ಯ ಪ್ರಭಾವ ಬೀರದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!
ಐಪಿಎಲ್‌ನಂತಹ ದೊಡ್ಡ ಮಟ್ಟದ ಟೂರ್ನಿಯಲ್ಲಿ ಭ್ರಷ್ಟಾಚಾರ ಮತ್ತು ಫಿಕ್ಸಿಂಗ್‌ನಂತಹ ಚಟುವಟಿಕೆಗಳು ನಡೆಯದಂತೆ ತಡೆಯುವುದು ಬಿಸಿಸಿಐನ ಮುಖ್ಯ ಉದ್ದೇಶವಾಗಿದೆ.
ಪ್ರಸಕ್ತ ಸೀಸನ್‌ನಲ್ಲಿ ಆಟಗಾರರು, ಸಿಬ್ಬಂದಿ ಮತ್ತು ತಂಡದ ಅಧಿಕಾರಿಗಳಿಂದ ಹಲವಾರು “ಅಕ್ರಮಗಳು” ಮತ್ತು ಭದ್ರತಾ ನಿಯಮಗಳ ಉಲ್ಲಂಘನೆ ನಡೆದಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ.
ಇದೀಗ ಟೂರ್ನಿಯ ಘನತೆಗೆ, ಆಟಗಾರರ ಖಾಸಗಿತನಕ್ಕೆ ಮತ್ತು ಭದ್ರತೆಗೆ ಯಾವುದೇ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡ ಅಥವಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.